ಎರಡು ವರ್ಷಗಳ ಹಿಂದೆ ಆರಂಭವಾದ 'ಸೀತಾ ವಲ್ಲಭ ' ಧಾರಾವಾಹಿ ಮುಂದಿನ ವಾರ ಮುಕ್ತಾಯಗೊಳ್ಳುವ ವಿಚಾರ ಧಾರಾವಾಹಿ ಪ್ರಿಯರಿಗೆ ತಿಳಿದೇ ಇದೆ. ಧಾರಾವಾಹಿಯಲ್ಲಿ ನಾಯಕಿ ಗುಬ್ಬಿ ಅಲಿಯಾಸ್ ಮೈಥಿಲಿ ಆಗಿ ನಟಿಸಿರುವ ಸುಪ್ರಿತಾ ಸತ್ಯನಾರಾಯಣ ಧಾರಾವಾಹಿ ಜರ್ನಿ ಬಗ್ಗೆ ಮಾತನಾಡಿದ್ದಾರೆ.
'ಸೀತಾ ವಲ್ಲಭ ' ನನ್ನ ಮೊದಲ ಧಾರಾವಾಹಿ. ಮುಂದಿನ ವಾರ ಈ ಒಂದು ಸುಂದರವಾದ ಪಯಣ ಕೊನೆಗೊಳ್ಳಲಿದೆ. ಇನ್ನು ಒಂದೇ ವಾರವಷ್ಟೇ ಶೂಟಿಂಗ್ ಇರೋದು. ಧಾರಾವಾಹಿ ತಂಡವನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಎರಡು ವರ್ಷಗಳಿಂದ ಒಂದೇ ಮನೆಯವರಂತೆ ಇರುವ ನಾವು ಇದೀಗ ದೂರವಾಗುತ್ತಿದ್ದೇವೆ. ಧಾರಾವಾಹಿ ಮುಗಿದ ಮೇಲೆ ಎಲ್ಲರೂ ಈ ರೀತಿಯಾಗಿ ಮತ್ತೆ ಸೇರಲು ತುಂಬಾನೇ ಕಷ್ಟ. ಈ ಅಗಲಿಕೆ ಅನಿವಾರ್ಯವಾದರೂ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ'.
'ನನ್ನ ನಟನಾ ಬದುಕಿನಲ್ಲಿ ನಾನು ಎಂದಿಗೂ ಗುಬ್ಬಿ ಪಾತ್ರವನ್ನು ಮರೆಯಲು ಸಾಧ್ಯವೇ ಇಲ್ಲ. ಮೈಥಿಲಿ ಅಲಿಯಾಸ್ ಗುಬ್ಬಿಯಾಗಿ ಮೊದಲ ಧಾರಾವಾಹಿಯಲ್ಲೇ ಯಶಸ್ಸು ಪಡೆದಿದ್ದೇನೆ. ವೀಕ್ಷಕರು ನನಗೆ ಅಪಾರ ಪ್ರೀತಿ, ಪ್ರೋತ್ಸಾಹ ನೀಡಿದ್ದಾರೆ. ನಾನು ಎಲ್ಲಿ ಹೋದರೂ ಜನರು ನನ್ನನ್ನು ಮೈಥಿಲಿ ಎಂದೇ ಗುರುತಿಸುವಾಗ ಸಾರ್ಥಕ ಎನಿಸುತ್ತದೆ ' ಎಂದು ಸುಪ್ರಿತಾ ಹೇಳಿದ್ದಾರೆ.
ಸುಪ್ರಿತಾ ಸತ್ಯನಾರಾಯಣ 'ರಹದಾರಿ' ಚಿತ್ರದ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ. ಸದ್ಯಕ್ಕೆ ಸಿನಿಮಾ ಶೂಟಿಂಗ್ ಆರಂಭವಾಗುವುದನ್ನು ಕಾಯುತ್ತಿದ್ದಾರೆ. ಸಿನಿರಂಗದಿಂದ ಒಂದಷ್ಟು ಆಫರ್ಗಳು ಬರುತ್ತಿದೆ. ನನಗೆ ಸಿನಿಮಾ ರಂಗ, ಸೀರಿಯಲ್ ಎಂಬ ವ್ಯತ್ಯಾಸ ಗೊತ್ತಿಲ್ಲ. ಕಲಾವಿದರು ಎಂದ ಮೇಲೆ ಜನರಿಗೆ ಮನರಂಜನೆ ನೀಡುವುದಷ್ಟೇ ನಮ್ಮ ಉದ್ದೇಶ ಎಂದು ಸುಪ್ರಿತಾ ಹೇಳುತ್ತಾರೆ.