ಲಾಕ್ ಡೌನ್ನಿಂದಾಗಿ ತೆರೆಮರೆಗೆ ಸರಿದ ಧಾರಾವಾಹಿಗಳಿಗೆ ಲೆಕ್ಕವಿಲ್ಲ. ಕನ್ನಡ ಕಿರುತೆರೆಯಲ್ಲಿ ಬರೋಬ್ಬರಿ 30 ಧಾರಾವಾಹಿಗಳು ಈಗಾಗಲೇ ಪ್ರಸಾರ ನಿಲ್ಲಿಸಿವೆ. ವೀಕ್ಷಕರ ಕೊರತೆ ಇದಕ್ಕೆ ಕಾರಣ ಎಂದು ಹೇಳಲಾದರೂ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ.
ಕಳೆದ ವಾರವಷ್ಟೇ 'ಇವಳು ಸುಜಾತಾ' ಧಾರಾವಾಹಿಯ ಕೊನೆಯ ಸಂಚಿಕೆ ಪ್ರಸಾರವಾಗಿತ್ತು. ಇದೀಗ ಮತ್ತೊಂದು ಧಾರಾವಾಹಿ ಕೂಡಾ ಪ್ರಸಾರ ನಿಲ್ಲಿಸಲಿದ್ದುಈ ತಿಂಗಳ ಕೊನೆಯಲ್ಲಿ ಮುಕ್ತಾಯವಾಗಲಿದೆ. ಉದಯ ವಾಹಿನಿಯಲ್ಲಿ ರಮೇಶ್ ಅರವಿಂದ್ ನಿರ್ಮಾಣದಲ್ಲಿ ಪ್ರಸಾರವಾಗುತ್ತಿರುವ ಸೂಪರ್ ನ್ಯಾಚುರಲ್ ಧಾರಾವಾಹಿ 'ನಂದಿನಿ 2' ಈ ತಿಂಗಳ ಕೊನೆಯಲ್ಲಿ ಮುಗಿಯಲಿದೆ. ಫ್ಯಾಂಟಸಿ ಡ್ರಾಮಾ ಆಧಾರಿತ ನಂದಿನಿ ಧಾರಾವಾಹಿಗೆ ಹೆಚ್ಚು ಪ್ರೇಕ್ಷಕರು ಇಲ್ಲದಿರುವುದು ಧಾರಾವಾಹಿ ಅಂತ್ಯಗೊಳ್ಳಲು ಕಾರಣ ಎನ್ನಲಾಗುತ್ತಿದೆ.
ಅದ್ಧೂರಿ ಶೂಟಿಂಗ್ ಸೆಟ್, ಗ್ರಾಫಿಕ್ಸ್ ಮತ್ತು ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದ ನಂದಿನಿ ಧಾರಾವಾಹಿಯಲ್ಲಿ ಪಂಚಭಾಷಾ ತಾರೆ ಛಾಯಾ ಸಿಂಗ್ ನಾಯಕಿ ಜನನಿಯಾಗಿ ಅಭಿನಯಿಸಿದ್ದಾರೆ. ಈ ಮೊದಲು ಜನನಿಯಾಗಿ ಅಭಿನಯಿಸುತ್ತಿದ್ದ ನಿತ್ಯಾ ರಾಮ್ ಮದುವೆಯಾಗಿ ಆಸ್ಟ್ರೇಲಿಯಾಗೆ ಹೋದ ನಂತರ ಅವರ ಜಾಗಕ್ಕೆ ಛಾಯಾ ಸಿಂಗ್ ಬಂದಿದ್ದರು. ಛಾಯಾ ಅಭಿನಯಕ್ಕೆ ಕೂಡಾ ವೀಕ್ಷಕರು ಫಿದಾ ಆಗಿದ್ದರು. ಉಳಿದಂತೆ ನಾಯಕ ವಿರಾಟ್ ಆಗಿ ವಿನಯ್ ಗೌಡ, ಅನು ಪೂವಮ್ಮ, ರಶ್ಮಿ , ಜಯಶ್ರೀ ರಾಜ್, ರೇಖಾ ರಾವ್, ಕಾವ್ಯ ಶಾಸ್ತ್ರಿ, ಶ್ರೀಕಾಂತ್ ಹೆಬ್ಳೀಕರ್ ಮುಂತಾದವರು ತಾರಾಗಣದಲ್ಲಿದ್ದರು.
ಧಾರಾವಾಹಿ ಪಯಣದ ಬಗ್ಗೆ ವಿನಯ್ ಹೇಳಿದ್ದೇನು?
'ನಂದಿನಿ' ಸೀಕ್ವೆಲ್ನಲ್ಲಿ ನಾಯಕ ವಿರಾಟ್ ಆಗಿ ನಟಿಸಿದ್ದ ವಿನಯ್ ಗೌಡ ಅವರು ಧಾರಾವಾಹಿ ಜರ್ನಿ ಬಗ್ಗೆ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಅನುಭವ ಹಂಚಿಕೊಂಡಿದ್ದಾರೆ. ನಿಮಗೆಲ್ಲಾ ತಿಳಿದಿರುವ ಹಾಗೆ ನಂದಿನಿ ಧಾರಾವಾಹಿ ಇದೇ ತಿಂಗಳ 31 ರಂದು ಮುಕ್ತಾಯಗೊಳ್ಳಲಿದೆ. ಆ ಮೂಲಕ ಬಣ್ಣದ ಲೋಕದ ಒಂದು ಸುಂದರ ಪಯಣ ನಿಲ್ಲಲಿದೆ. ಧಾರಾವಾಹಿ ನೋಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿದ್ದೀರಿ. ನಿಮ್ಮೆಲ್ಲರ ಪ್ರೀತಿಗೆ ನಾನು ಚಿರಋಣಿ' ಎಂದು ಬರೆದುಕೊಂಡಿದ್ದಾರೆ.