ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿಯಲ್ಲಿ ನಾಯಕ ಗುರುಮೂರ್ತಿಯಾಗಿ ನಟಿಸುತ್ತಿದ್ದ ಭವಾನಿ ಸಿಂಗ್, ಅದೇ ಧಾರಾವಾಹಿಯಲ್ಲಿ ನಾಯಕಿ ಸುಬ್ಬಲಕ್ಷ್ಮಿ ಗೆಳತಿ ರೇವತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಪಂಕಜಾ ಶಿವಣ್ಣ ಅವರನ್ನು ಪ್ರೀತಿಸಿ ಮದುವೆಯಾಗಿರುವುದು ಎಲ್ಲರಿಗೂ ತಿಳಿದ ವಿಚಾರ.
- " class="align-text-top noRightClick twitterSection" data="
">
ಕಳೆದ ನವೆಂಬರ್ನಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಮೊದಲಿನ ಸಂಬಂಧ ಮತ್ತು ಮದುವೆಯ ನಂತರದ ಸಂಬಂಧ ಎರಡಕ್ಕೂ ವ್ಯತ್ಯಾಸವಿದೆ ಎಂದು ಹೇಳುವ ಭವಾನಿ ಸಿಂಗ್, ಲಾಕ್ಡೌನ್ ಸಮಯವನ್ನು ಮುದ್ದಿನ ಮಡದಿ ಪಂಕಜಾ ಜೊತೆ ಎಂಜಾಯ್ ಮಾಡುತ್ತಿದ್ದಾರೆ. 'ಕಾಕತಾಳೀಯ ಎಂಬಂತೆ ನಾವಿಬ್ಬರೂ ತಿಂಡಿ ಪ್ರೇಮಿಗಳು, ಅದೇ ಕಾರಣದಿಂದ ನಾವಿಬ್ಬರೂ ಸೇರಿ ಅಡುಗೆ ಮಾಡುತ್ತೇವೆ. ತಿಂಡಿಯ ವಿಷಯ ಬಂದರೆ ಪಂಕಜಾ ಒಂದು ಕೈ ಮೇಲೆಯೇ, ಅವಳು ಭಯಂಕರ ಫುಡಿ. ಆನ್ಲೈನ್ನಲ್ಲಿ ಕಾಣುವ ಹೊಸ ಹೊಸ ರೆಸಿಪಿಗಳನ್ನು ಲಾಕ್ಡೌನ್ ಸಮಯದಲ್ಲಿ ಇಬ್ಬರೂ ಸೇರಿ ಟ್ರೈ ಮಾಡುತ್ತಿದ್ದೇವೆ' ಎನ್ನುತ್ತಾರೆ ಭವಾನಿ ಸಿಂಗ್.
ಭವಾನಿ ಸಿಂಗ್ ನಟ ಮಾತ್ರವಲ್ಲ ಅದ್ಭುತ ಚಿತ್ರ ಕಲಾವಿದ ಕೂಡಾ ಹೌದು. ನಟನಾಗಿ ಅಭಿನಯಿಸುತ್ತಿದ್ದ ಭವಾನಿಸಿಂಗ್ ಒಳ್ಳೆಯ ಪೇಂಯ್ಟರ್ ಎಂದು ತಿಳಿದದ್ದೇ ಲಾಕ್ಡೌನ್ ಸಮಯದಲ್ಲಿ. ಬಾಲ್ಯದಿಂದಲೂ ಚಿತ್ರಕಲೆಯತ್ತ ವಿಶೇಷ ಒಲವು ಬೆಳೆಸಿಕೊಂಡಿದ್ದ ಭವಾನಿ ಸಿಂಗ್ ಲಾಕ್ಡೌನ್ ಸಮಯದಲ್ಲಿ ಬಾಲ್ಯದ ಹವ್ಯಾಸದತ್ತ ಗಮನ ಹರಿಸಿದ್ದಾರೆ. ಪ್ರೀತಿಯ ಮಡದಿ ಪಂಕಜಾ ಅವರ ಚಿತ್ರ ಬಿಡಿಸಿರುವ ಭವಾನಿ ಸಿಂಗ್ ಅವರಿಗೆ ಪತ್ನಿಯಿಂದ ಕಾಂಪ್ಲಿಮೆಂಟ್ಸ್ ಕೂಡಾ ದೊರೆತಿದೆ. ಒಟ್ಟಾರೆ ಈ ದಂಪತಿ ಲಾಕ್ಡೌನ್ ದಿನಗಳನ್ನು ಎಂಜಾಯ್ ಮಾಡುತ್ತಿದ್ದು ಬೋರ್ ಎನಿಸಿದಾಗ ಒಬ್ಬರ ಕಾಲು ಎಳೆಯುತ್ತಾ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ.