ಮಾತಿನ ಮಲ್ಲ ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿ ಬರುತ್ತಿದ್ದ ಹಾಸ್ಯ ಕಾರ್ಯಕ್ರಮ 'ಮಜಾ ಟಾಕೀಸ್', ಬರೋಬ್ಬರಿ 5 ವರ್ಷಗಳ ಕಾಲ ಪ್ರಸಾರ ಕಾಣುವುದರ ಜೊತೆಗೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸಿತ್ತು. ಹಿಂದಿಯ ಕಪಿಲ್ ಶರ್ಮಾ ಶೋ ನಂತೆ 'ಮಜಾ ಟಾಕೀಸ'ನ್ನು ಕೂಡಾ ಸೃಷ್ಟಿ ಮಾಡಿದ್ದು ಕಪಿಲ್ ಶರ್ಮಾ ಅವರಂತೆ ಸೃಜನ್ ಕೂಡಾ ಕನ್ನಡಿಗರನ್ನು ರಂಜಿಸಿದ್ದರು.
ಯಶಸ್ವಿ ಎರಡು ಸೀಸನ್ಗಳನ್ನು ಮುಗಿಸಿರುವ 'ಮಜಾ ಟಾಕೀಸ್' ಕಾರ್ಯಕ್ರಮ ಕನ್ನಡ ಕಿರುತೆರೆಯಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ಸೃಜನ್ ಲೋಕೇಶ್ ಅವರು 'ಮಜಾ ಟಾಕೀಸ್'ನ ರೂವಾರಿ ಆಗಿದ್ದರೆ, ಸೃಜಾ ಪತ್ನಿ ರಾಣಿ ಆಗಿ ಶ್ವೇತಾ ಚಂಗಪ್ಪ ಕಾಣಿಸಿಕೊಂಡಿದ್ದರು. ಖ್ಯಾತ ನಿರೂಪಕಿ, ಅಚ್ಚ ಕನ್ನಡ ಮಾತನಾಡುವ ನಟಿ ಅಪರ್ಣಾ ಅವರು ಮೊದಲ ಬಾರಿಗೆ ಕಾಮಿಡಿ ಪಾತ್ರಕ್ಕೆ ಜೀವ ತುಂಬಿದ್ದರು. ಒನ್ ಆ್ಯಂಡ್ ಒನ್ಲಿ ವರಲಕ್ಷ್ಮಿಯಾಗಿ ಬದಲಾದ ಅಪರ್ಣಾ ನವಿರಾದ ಹಾಸ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದರು.
ಮಂಡ್ಯ ರಮೇಶ್, ಕುರಿ ಪ್ರತಾಪ್ ಅವರ ಹಾಸ್ಯವೂ ಮುದ ನೀಡುತ್ತಿತ್ತು. ಪ್ರತಿ ವಾರಾಂತ್ಯವೂ ಹೊಸ ಸಂಚಿಕೆಗಳೊಂದಿಗೆ ವೀಕ್ಷಕರನ್ನು ರಂಜಿಸುತ್ತಿದ್ದ 'ಮಜಾ ಟಾಕೀಸ್' ಬರೋಬ್ಬರಿ 500 ಸಂಚಿಕೆಗಳನ್ನು ಪೂರೈಸಿದ್ದು ಇದೀಗ ಲಾಕ್ಡೌನ್ ಸಮಯದಲ್ಲಿ 'ಮಜಾ ಟಾಕೀಸ್' ಮರುಪ್ರಸಾರ ಕಾಣುತ್ತಿದೆ. ಲಾಕ್ಡೌನ್ ಸಮಯದಲ್ಲಿ ಒಂದಷ್ಟು ಹಳೆಯ ಧಾರಾವಾಹಿ, ರಿಯಾಲಿಟಿ ಶೋಗಳು ಈಗಾಗಲೇ ಪ್ರಸಾರ ಆರಂಭಿಸಿದ್ದು ಆ ಸಾಲಿಗೆ 'ಮಜಾ ಟಾಕೀಸ್' ಸೇರ್ಪಡೆಯಾಗಿದೆ. ಮೇ 26 ರಿಂದ ಧಾರಾವಾಹಿ ಚಿತ್ರೀಕರಣಕ್ಕೆ ಸರ್ಕಾರ ಅವಕಾಶ ನೀಡಿದ್ದು ಫ್ರೆಷ್ ಎಪಿಸೋಡ್ ಪ್ರಸಾರವಾಗುವವರೆಗೂ ವೀಕ್ಷಕರು ಕಾಯಲೇಬೇಕು.