ಕೋವಿಡ್-19 ಸಮಯದಲ್ಲಿ ಭಾರತವನ್ನು ಸಂಗೀತದ ಮೂಲಕ ಚೈತನ್ಯವಾಗಿ ಇಡುವ ಯೋಜನೆ ‘ಸಂಗೀತ್ ಸೇತು’ವನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ನಡೆಸಿಕೊಡುತ್ತಿದ್ದಾರೆ.
ಕಾರ್ಯಕ್ರಮದ ಮೊದಲನೇ ಕಂತಿನಲ್ಲಿ ದಕ್ಷಿಣ ಭಾರತದ ಜನಪ್ರಿಯ ಹಿನ್ನಲೆ ಗಾಯಕ ಡಾ ಎಸ್ ಪಿ ಬಲಸುಬ್ರಮಣ್ಯಂ ಅವರು ಹಾಡುವುದರೊಂದಿಗೆ ಉದ್ಘಾಟನೆಯಾಗಿದೆ. ಮೊದಲ ಕಂತು ಏಪ್ರಿಲ್ 10ರಂದು ಯೂಟ್ಯೂಬ್ನಲ್ಲಿ ಪ್ರಸಾರವಾಗಿದೆ.
ಭಾರತ ದೇಶದ ಎಲ್ಲ ಭಾಷೆಗಳ ಗೀತೆಗಳನ್ನು ಆಯಾ ಹಾಡುಗಾರರೇ ಚುಟುಕಾಗಿ ಹಾಡುವುದು ಇದರ ವಿಶೇಷ. ಇದರಲ್ಲಿ ಗಾಯಕರು ಒಟ್ಟಿಗೆ ಸೇರುವುದಿಲ್ಲ. ಅವರವರ ಮನೆ ಹಾಗೂ ಸ್ಟುಡಿಯೋದಿದಲೇ ರೆಕಾರ್ಡ್ ಮಾಡಿ ಅಕ್ಷಯ್ ಕುಮಾರ್ ತಂಡಕ್ಕೆ ತಲುಪಿಸುತ್ತಾರೆ.
ಅಕ್ಷಯ್ ಕುಮಾರ್ ದಿಗ್ಗಜರನ್ನು ಪರಿಚಯಿಸುತ್ತಾ, ಅವರಿರುವ ಸ್ಥಳದಿಂದಲೇ ಅವರಿಂದ ಹಾಡುಗಳನ್ನು ಹಾಡಿಸುವುದರ ಜೊತೆಗೆ, ‘ಸ್ಟೇ ಹೋಂ ಸ್ಟೇ ಸೇಫ್’ ಹಾಗೂ ಪ್ರಧಾನ ಮಂತ್ರಿ ಕೇರ್ಸ್ ನಿಧಿ ಬಗ್ಗೆ ಹೇಳಲಾಗುತ್ತದೆ.
'ರೋಜಾ’ ಚಿತ್ರದ ಹಿಂದಿ ಹಾಡನ್ನು ಹಾಡುವ ಮೂಲಕ ಎಸ್ಪಿಬಿ ಪ್ರಾರಂಭಿಸಿದರು. ಬಳಿಕ ಶಂಕರ್ ನಾಗ್ ಅವರ ‘ಗೀತಾ’ ಕನ್ನಡ ಚಿತ್ರದ ‘ಹಾಡು ಸಂತೋಷಕ್ಕೆ ಹಾಡು ಸಂತೋಷಕ್ಕೆ....ಕುಣಿದು....ತಾಳಕ್ಕೆ ಕುಣಿದು....' ಹಾಡನ್ನು ಹಾಡಿದರು. ಈ ಹಾಡಿಗೆ ಅಕ್ಷಯ್ ಕುಮಾರ್ ಶಿಳ್ಳೆ ಹೊಡೆದು ಮೆಚ್ಚುಗೆ ಸೂಚಿಸಿರು. ಇದಾದ ಬಳಿಕ ಎಸ್ಪಿಬಿ ತಮಿಳು ಹಾಡೊಂದನ್ನು ಹಾಡಿದ್ದಾರೆ.
ಬಳಿಕ ಕುಮಾರ್ ಶಾನು, ತಲತ್ ಅಜೀಜ್, ಸುರೇಶ್ ವಾಡ್ಕರ್, ಶಂಕರ್ ಮಹಾದೇವನ್ ಮತ್ತು ಶಾನ್ ತಲಾ ಮೂರು ಹಾಡುಗಳನ್ನು ಹಾಡುವುದರೊಂದಿಗೆ ಸುಮಾರು ಒಂದು ತಾಸಿನ 'ಸಂಗೀತ ಸೇತು' ಮೊದಲನೇ ಕಂತು ಮುಕ್ತಾಯವಾಗುತ್ತದೆ.
ಎರಡನೇ ಹಾಗೂ ಮೂರನೇ ಕಂತಿನಲ್ಲಿ ಲತಾ ಮಂಗೇಶ್ಕರ್, ಕೆ ಜೆ ಯೇಸುದಾಸ್, ಹರಿಹರನ್, ಉದಿತ್ ನಾರಾಯಣ್, ಅನೂಪ್ ಜಲೋಟ, ಪಂಕಜ್ ಉದಾಸ್, ಕವಿತಾ ಕೃಷ್ಣಮೂರ್ತಿ, ಸುದೇಶ್ ಬೋಸ್ಲೆ, ಸಲೀಂ ಮೇರ್ಚಂಟ್, ಸೋನು ನಿಗಂ, ಕೈಲಾಷ್ ಖೇರ್ ಹಾಡಿದ್ದಾರೆ.
ದೇಶ ಎದುರಿಸುತ್ತಿರುವ ಸಂದಿಗ್ದ ಪರಿಸ್ಥಿತಿಯಲ್ಲಿ ಮನೆಯಲ್ಲಿ ಕುಳಿತು ಗಾಯಕರು, ಮನೆಯಲ್ಲೇ ಇರುವ ಜನತೆಗೆ ಈ ಹಾಡುಗಳ ಮೂಲಕ ಮನರಂಜನೆ ನೀಡುತ್ತಿದ್ದಾರೆ. ಇಂಡಿಯನ್ ಸಿಂಗರ್ಸ್ ರೈಟ್ಸ್ ಅಸೋಸಿಯೇಷನ್ ರಾಷ್ಟ್ರ ಮಟ್ಟದಲ್ಲಿ ಈ ‘ಸಂಗೀತ್ ಸೇತು’ ಕಾರ್ಯಕ್ರಮವನ್ನು ನಿರ್ವಹಣೆ ಮಾಡುತ್ತಿದೆ. ಈ ಮೂರು ಕಂತಿನ ಕಾರ್ಯಕ್ರಮ ಕೆಲ ವಾಹಿನಿಗಳು ಹಾಗೂ ಯೂಟ್ಯೂಬ್ನಲ್ಲಿ ಲಭ್ಯವಿದೆ.