ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟ-ನಟಿಯರಿಗೆ ಸಿನಿಮಾದಲ್ಲಿ ಸ್ಟಾರ್ ನಟರೊಂದಿಗೆ ನಟಿಸುವ ಅವಕಾಶ ದೊರೆತರೆ ಅದಕ್ಕಿಂತ ಖುಷಿಯಾದ ವಿಚಾರ ಬೇರೊಂದಿಲ್ಲ. ಅನೇಕ ಕಲಾವಿದರು ಇಂಥ ಅವಕಾಶ ಗಳಿಸಿ ತಮ್ಮ ಆಸೆಯನ್ನು ನೆರವೇರಿಸಿಕೊಂಡಿದ್ದಾರೆ. ಇದೀಗ ಕಿರುತೆರೆ ನಟ ಸಿದ್ದು ಮೂಲಿಮನಿಗೆ ಕೂಡಾ ಇದೇ ರೀತಿಯ ಅವಕಾಶ ಒದಗಿಬಂದಿದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿಯಲ್ಲಿ ನಾಯಕ ಆದಿತ್ಯನ ತಮ್ಮ ಪ್ರೀತಂ ಆಗಿ ನಟಿಸಿ ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿರುವ ಸಿದ್ದು ಮೂಲಿಮನಿ ಸುದೀಪ್ ಅವರೊಂದಿಗೆ ನಟಿಸುತ್ತಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರೊಂದಿಗೆ ಸಿದ್ದುಮೂಲಿಮನಿ ಅಭಿನಯಿಸುತ್ತಿದ್ದಾರೆ . "ವಿಕ್ರಾಂತ್ ರೋಣ ಸಿನಿಮಾದಲ್ಲಿ ನಾನು ಮುನ್ನಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಕಿಚ್ಚ ಸುದೀಪ್ ಅವರೊಂದಿಗೆ ಅಭಿನಯಿಸುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಅನೂಪ್ ಭಂಡಾರಿಯವರಿಗೆ ನಾನು ಅದೆಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ ಸಿದ್ದು.
ಇದನ್ನೂ ಓದಿ: 'ಸೈನಾ' ಚಿತ್ರದಿಂದ ಶ್ರದ್ಧಾ ಕೈಬಿಡಲು ಕಾರಣವೇನು...ಮಾಧ್ಯಮದವರ ಪ್ರಶ್ನೆಗೆ ನಿರ್ದೇಶಕ ಪ್ರತಿಕ್ರಿಯಿಸಿದ್ದು ಹೀಗೆ..!
ಇದಕ್ಕೂ ಮುನ್ನ ಅನೂಪ್ ಭಂಡಾರಿ ನಿರ್ದೇಶಿಸಿದ್ದ 'ರಂಗಿತರಂಗ' ಸಿನಿಮಾದಲ್ಲಿ ಕೂಡಾ ನಟಿಸಿದ್ದೆ. ಅಷ್ಟೇ ಅಲ್ಲ ರಂಗಿ ತರಂಗ, ರಾಜರಥ ಸಿನಿಮಾದಲ್ಲಿ ನಾನು ಸಹಾಯಕ ನಿರ್ದೇಶಕ ಆಗಿ ಕೆಲಸ ಮಾಡಿದ್ದೇನೆ. ಇದೀಗ ಅವರ ತಂಡದೊಂದಿಗೆ ಮತ್ತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎನ್ನುತ್ತಾರೆ ಸಿದ್ದು ಮೂಲಿಮನಿ. 'ಪಾರು' ಧಾರಾವಾಹಿಯಲ್ಲಿ ಪ್ರೀತಂ ಆಗಿ ಅಭಿನಯಿಸುತ್ತಿರುವ ಸಿದ್ದು ಮೂಲಿಮನಿ 'ಧರಣಿಮಂಡಲ ಮಧ್ಯದೊಳಗೆ' , 'ಸಾರ್ವಜನಿಕರಿಗೆ ಸುವರ್ಣಾವಕಾಶ' ಚಿತ್ರಗಳಲ್ಲಿ ಕೂಡಾ ಅಭಿನಯಿಸುತ್ತಿದ್ದಾರೆ.