'ಮಂಗಳಗೌರಿ ಮದುವೆ' ಧಾರಾವಾಹಿಯಲ್ಲಿ ನಾಯಕ ರಾಜೀವನ ಅಣ್ಣ ಆಗಿ ಅಭಿನಯಿಸುತ್ತಿರುವ ಹರೀಶ್ ಗೌಡ ಇದೀಗ ಸಾಮಾಜಿಕ ಕಾರ್ಯಕ್ರಮದ ಮೂಲಕ ಸದ್ದು ಮಾಡುತ್ತಿದ್ದಾರೆ. ಮೂಲತಃ ಮಾಲೂರಿನವರಾದ ಹರೀಶ್ ಗೌಡ ಮಾಲೂರಿನ ಹಳ್ಳಿ ಹಳ್ಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಿದ್ದಾರೆ.
ಲಕ್ಕೂರು ಹೋಬಳಿಯ ಬಾಳಿಗಾನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಾಳಿಗಾನಹಳ್ಳಿ, ಮಿರುಪನಹಳ್ಳಿ, ಚಿಕ್ಕಇಗ್ಗಲೂರು, ನಾಗಪುರ, ಚೌಡೇನಹಳ್ಳಿ, ಗೊನೂರು, ಮಿನಿಸಂದ್ರ, ಸೂಣ್ಣೂರು, ಜಯಮಂಗಲ, ತಾಳಕುಂಟೆ ಗ್ರಾಮಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಿ ಕೊರೊನಾ ಸೋಂಕು ಹರಡದಂತೆ ಜಾಗ್ರತೆ ವಹಿಸಿದ್ದಾರೆ. ಇದರ ಜೊತೆಗೆ "ದಯಮಾಡಿ ಎಲ್ಲರೂ ಮನೆಯಲ್ಲಿ ಸುರಕ್ಷಿತವಾಗಿರಿ. ಮನೆಯಿಂದ ಹೊರಹೋಗುವಾಗ ಮಾಸ್ಕ್ ಧರಿಸಿ" ಎಂದು ಅರಿವು ಮೂಡಿಸಿದ್ದಾರೆ.
"ನಾವು ಈಗಾಗಲೇ ಒಂದು ತಂಡ ರಚಿಸಿಕೊಂಡು ಹಳ್ಳಿಯ ಮನೆ ಮನೆಗೂ ತೆರಳಿ ಸ್ಯಾನಿಟೈಸರ್ ಸಿಂಪಡಣೆ ಮಾಡುತ್ತಿದ್ದೇವೆ. ಮುಖ್ಯವಾಗಿ ಮಾಸ್ಕ್ ಧರಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಕೊರೊನಾ ಪಾಸಿಟಿವ್ ಬಂದವರಿಗೆ ಕೋವಿಡ್ ಕೇರ್ ಸೆಂಟರ್‌ಗಳಿಗೆ ಹೋಗಿ ಚಿಕಿತ್ಸೆ ಪಡೆಯಿರಿ ಎಂದು ಮನವಿ ಮಾಡುತ್ತಿದ್ದೇವೆ. ಉಳಿದಂತೆ ಆಶಾ ಕಾರ್ಯಕರ್ತೆಯರಿಗೆ ಫುಡ್ ಕಿಟ್, ಮಾಸ್ಕ್ ವಿತರಣೆ ಮಾಡುತ್ತಿದ್ದೇವೆ" ಎಂದು ಹರೀಶ್ ಗೌಡ ತಿಳಿಸಿದ್ದಾರೆ.