ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಿಥುನ ರಾಶಿ' ಧಾರಾವಾಹಿ ಕೂಡಾ ತನ್ನದೇ ಆದ ವೀಕ್ಷಕರನ್ನು ಹೊಂದಿದೆ. ಈ ಧಾರಾವಾಹಿಯಲ್ಲಿ ನಾಯಕಿ ರಾಶಿ ಅಕ್ಕ ಸುರಕ್ಷಾ ಆಗಿ ನಟಿಸುತ್ತಿರುವ ಚೆಂದುಳ್ಳಿ ಚೆಲುವೆ ಹೆಸರು ಸಂಪದ. ನಾಗತಿಹಳ್ಳಿ ಚಂದ್ರಶೇಖರ್ ಅವರ 'ಟೆಂಟ್' ಸಿನಿಮಾ ಸಂಸ್ಥೆಯಿಂದ ತರಬೇತಿ ಪಡೆದಿರುವ ಸಂಪದಗೆ ಸಾಂಸ್ಕೃತಿಕ ಚಟುವಟಿಕೆಗಳತ್ತ ವಿಶೇಷ ಒಲವು ಇಲ್ಲದಿದ್ದರೂ ಅವರನ್ನು ಸೆಳೆದಿದ್ದು ಮಾಡೆಲಿಂಗ್ ಕ್ಷೇತ್ರ.

ಮಾಡೆಲಿಂಗ್ನತ್ತ ಆಕರ್ಷಿತರಾಗಿದ್ದ ಸಂಪದ, ಒಂದು ಕ್ಷಣ ಕೂಡಾ ಯೋಚಿಸದೆ ಆ ಕ್ಷೇತ್ರಕ್ಕೆ ಕಾಲಿಟ್ಟರು. ಅಲ್ಲಿ ಅವರಿಗೆ ದೊರೆತ ಉತ್ತಮ ಪ್ರೋತ್ಸಾಹದ ಕಾರಣದಿಂದಲೇ 'ಟೆಂಟ್ ಸಿನಿಮಾ' ನಟನಾ ಶಾಲೆಯಲ್ಲಿ ತರಬೇತಿ ಪಡೆಯಲು ಸಹಕಾರಿಯಾಯಿತು. ಈ ತರಬೇತಿಯಿಂದ ನಟನೆ ಬಗ್ಗೆ ಅವರಿಗೆ ಇದ್ದ ಭಯ ಕೂಡಾ ದೂರವಾಯಿತು. ಅಲ್ಲಿಂದ ಮುಂದೆ ಅವರು ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದರು. 'ಫೈವ್ ಮಿನಿಟ್ಸ್' ಎಂಬ ಕಿರುಚಿತ್ರದಲ್ಲಿ ಅಭಿನಯಿಸಿದ ಸಂಪದ, ತಾನು ಮುಂದುವರಿಯುವುದಾದರೆ ಅದು ನಟನಾ ಕ್ಷೇತ್ರದಲ್ಲೇ ಎಂದು ದೃಢನಿರ್ಧಾರ ಮಾಡಿದರು.

ಧಾರಾವಾಹಿಯಲ್ಲಿ ಬಣ್ಣ ಹಚ್ಚಬೇಕೆಂದೇನೋ ನಿರ್ಧಾರ ಮಾಡಿದ್ದಾಯಿತು. ಆದರೆ ಅವಕಾಶ ಗಿಟ್ಟಿಸಿಕೊಳ್ಳಲು ಆಡಿಶನ್ ನಡೆಯುವ ಸ್ಥಳಕ್ಕೆಲ್ಲಾ ಹಾಜರಾಗುತ್ತಿದ್ದರು ಸಂಪದ. ಅವರು ನೀಡಿದ ಆಡಿಶನ್ಗಳಿಗೆ ಲೆಕ್ಕವಿಲ್ಲ. ಆದರೆ ಯಾವುದೇ ಅವಕಾಶ ಲಭಿಸದಿದ್ದಾಗ ಬೇಸರಗೊಂಡ ಸಂಪದ, ತನಗೆ ನಟನೆಯೂ ಆಗಿ ಬರುವುದಿಲ್ಲ ಎಂದು ನಿರ್ಧರಿಸಿ ಆ್ಯಕ್ಟಿಂಗ್ ಆಸೆಯನ್ನು ಕೂಡಾ ಕೈ ಬಿಡಲು ನಿರ್ಧರಿಸಿದ್ದರು. ಆದ್ರೆ ಎರಡು ದಿನಗಳು ಕಳೆದಾಗ ಅವರಿಗೆ 'ಮಿಥುನ ರಾಶಿ' ಧಾರಾವಾಹಿ ತಂಡದಿಂದ ಕರೆ ಬಂತು. ಅಲ್ಲಿಗೆ ಅವರ ಆ್ಯಕ್ಟಿಂಗ್ ಆಸೆ ಕೂಡಾ ನೆರವೇರಿತು. 'ಮಿಥುನ ರಾಶಿ' ಯ ಸುರಕ್ಷಾ ಆಗಿ ಕಿರುತೆರೆ ಪಯಣ ಆರಂಭಿಸಿದ ಸಂಪದ, ಇದೀಗ ಬಣ್ಣದ ಲೋಕದಲ್ಲಿ ಬ್ಯುಸಿಯಾಗಿದ್ದಾರೆ.