ಲಾಕ್ಡೌನ್ ಸಮಯದಲ್ಲಿ ಧಾರಾವಾಹಿಗಳ ಹೊಸ ಸಂಚಿಕೆಗಳ ಬ್ಯಾಂಕಿಂಗ್ ಇಲ್ಲದ ಕಾರಣ ಹಳೆಯ ಧಾರಾವಾಹಿಗಳು ಮರು ಪ್ರಸಾರ ಆರಂಭಿಸಿದ್ದವು. ರಾಧಾ ರಮಣ, ಪದ್ಮಾವತಿ, ಕಿನ್ನರಿ, ಅಶ್ವಿನಿ ನಕ್ಷತ್ರ, ಅರುಂಧತಿಯಂತಹ ಧಾರಾವಾಹಿಗಳು ಈಗಾಗಲೇ ಮರು ಪ್ರಸಾರ ಆರಂಭಿಸಿದ್ದು, ಈಗಲೂ ಪ್ರಸಾರ ಕಾಣುತ್ತಿವೆ. ಇದರ ಜೊತೆಗೆ ಟಿ.ಎನ್. ಸೀತಾರಾಮ್ ನಿರ್ದೇಶನದ ಜನಪ್ರಿಯ ಧಾರಾವಾಹಿ ಮಾಯಾಮೃಗ ಮತ್ತೆ ಪ್ರಸಾರ ಕಾಣಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಬರೋಬ್ಬರಿ ಎರಡು ದಶಕಗಳಷ್ಟು ಹಳೆಯ ಮಾಯಾಮೃಗ ಧಾರಾವಾಹಿ ಮತ್ತೆ ಮರು ಪ್ರಸಾರ ಆಗುವ ವಿಚಾರವನ್ನು ಸ್ವತಃ ಧಾರಾವಾಹಿಯ ನಿರ್ದೇಶಕರಾಗಿರುವ ಟಿ.ಎನ್. ಸೀತಾರಾಮ್ ಹೇಳಿಕೊಂಡಿದ್ದಾರೆ. 'ಮಾಯಾಮೃಗ ಧಾರಾವಾಹಿ ಮೊದಲಿನಿಂದ ಕಡೆಯವರೆಗೆ ಮತ್ತೊಮ್ಮೆ ಪ್ರಸಾರವಾಗುವ ಸಾಧ್ಯತೆ ಇದೆ. ನೀವು ಹೆಚ್ಚಿನ ಸಂಖ್ಯೆಯಲ್ಲಿ ನೋಡುವ ಹಾಗಿದ್ದರೆ...' ಎಂದು ಟಿ.ಎನ್. ಸೀತಾರಾಮ್ ಬರೆದುಕೊಂಡಿದ್ದಾರೆ.
ಟಿ.ಎನ್. ಸೀತಾರಾಮ್ ಅವರು ಹಾಕಿರುವಂತಹ ಈ ಪೋಸ್ಟ್ ನೋಡಿ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಆದಷ್ಟು ಬೇಗ ಪ್ರಸಾರವಾದರೆ ಚೆನ್ನ ಎಂಬ ಕಮೆಂಟ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
1988ರಲ್ಲಿ ಡಿ ಡಿ ಚಂದನದಲ್ಲಿ ಪ್ರಸಾರವಾಗುತ್ತಿದ್ದ ಮಾಯಾಮೃಗ ಧಾರಾವಾಹಿಯು ಟೈಟಲ್ ಸಾಂಗ್ ಮೂಲಕವೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿತ್ತು. ಲಕ್ಷ್ಮೀ ಚಂದ್ರಶೇಖರ್, ಮಾಳವಿಕಾ ಅವಿನಾಶ್, ಮಂಜು ಭಾಷಿಣಿ, ಎಂ.ಡಿ. ಪಲ್ಲವಿ, ಮುಖ್ಯಮಂತ್ರಿ ಚಂದ್ರು, ವೈಶಾಲಿ ಕಾಸರವಳ್ಳಿಯಂತಹ ಕಲಾವಿದರು ಅಭಿನಯಿಸಿದ್ದ ಮಾಯಾಮೃಗ ಧಾರಾವಾಹಿ ಮರು ಪ್ರಸಾರ ಆಗುತ್ತಿರುವ ಸಂಗತಿ ಪ್ರೇಕ್ಷಕರಿಗೆ ಸಂತಸ ನೀಡಿದೆ.
ಈಗಾಗಲೇ ಮಗಳು ಜಾನಕಿ ಧಾರಾವಾಹಿ ಮುಕ್ತಾಯಗೊಂಡ ಕಾರಣ ಬೇಸರದಿಂದಿರುವ ಪ್ರೇಕ್ಷಕರು, ಇದೀಗ ಮಾಯಾಮೃಗ ಧಾರಾವಾಹಿ ಪ್ರಸಾರವಾಗುತ್ತಿರುವ ಸುದ್ದಿ ಕೇಳಿ ಫುಲ್ ಖುಷಿಯಾಗಿದ್ದಾರೆ.