ಬೋಲ್ಡ್ ನಟನೆ ಹಾಗೂ ಗ್ಲ್ಯಾಮರ್ ಲುಕ್ನಿಂದ ಕನ್ನಡ ಚಿತ್ರರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟಿ ರಾಗಿಣಿ ದ್ವಿವೇದಿ, ಸದ್ಯಕ್ಕೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೆಲ್ಲದರ ಮಧ್ಯೆಯೇ ತುಪ್ಪದ ಬೆಡಗಿ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.
ಹೌದು, ರಾಗಿಣಿ 'ಸಾರಿ- ಕರ್ಮ ರಿಟರ್ನ್ಸ್' ('Sorry Karma Returns')ಎಂಬ ಸಿನಿಮಾದಲ್ಲಿ ಬಣ್ಣಹಚ್ಚಲು ಮುಂದಾಗಿದ್ದಾರೆ. ಚಿತ್ರಕ್ಕೆ 'ಕರ್ಮ ರಿಟರ್ನ್ಸ್' ಎಂಬ ಟ್ಯಾಗ್ ಲೈನ್ ನೀಡಲಾಗಿದೆ. ಬಹಳ ದಿನಗಳ ನಂತರ ರಾಗಿಣಿ ದ್ವಿವೇದಿ ಪ್ರಧಾನ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದು, ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಆಕ್ಷನ್, ಕ್ರೈಂ, ಥ್ರಿಲ್ಲರ್ ಕಥೆಯಾಗಿದ್ದು, ಸದ್ಯಕ್ಕೆ 'ಸಾರಿ' ಸಿನಿಮಾದ ಫೋಟೋಶೂಟ್ ಮೇಕಿಂಗ್ ಅನ್ನ ಚಿತ್ರತಂಡ ಅನಾವರಣ ಮಾಡಿದೆ.
ನಿರ್ದೇಶಕ ಬ್ರಹ್ಮ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. 'ಕಬ್ಜ', 'ವಿಕ್ರಾಂತ್ ರೋಣ' ಚಿತ್ರಗಳಂತೆ ತಂತ್ರಜ್ಞಾನಕ್ಕೆ ಮಹತ್ವ ಕೊಟ್ಟಿರುವ ಚಿತ್ರತಂಡ, ಹಾಲಿವುಡ್ ಶೈಲಿಯ ಮೇಕಿಂಗ್ ಮಾಡಿದೆ. ಜೊತೆಗೆ ಖ್ಯಾತ ಅನುಭವಿ ತಂತ್ರಜ್ಞರು ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಸಕಲೇಶಪುರ, ಬೆಂಗಳೂರು ಹಾಗೂ ಕಗ್ಗಲೀಪುರದ ಸುತ್ತಮುತ್ತ 'ಸಾರಿ' ಚಿತ್ರದ ಶೂಟಿಂಗ್ ನಡೆಯುತ್ತಿದೆ.
ಇನ್ನು ಈ ಸಿನಿಮಾಕ್ಕೆ ರಾಜು ಎಮ್ಮಿಗನೂರು ಸಂಗೀತವಿದ್ದು, ರಾಜೀವ್ ಗಣೇಸನ್ ಅವರ ಛಾಯಾಗ್ರಹಣವಿದೆ. ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ, ಭೂಪತಿರಾಜ್ ಸಂಕಲನ, ಇಮ್ರಾನ್, ಮನು ನೃತ್ಯ ನಿರ್ದೇಶನ ಮಾಡಲಿದ್ದಾರೆ. ರಾಗಿಣಿ ಜೊತೆಗೆ ಅಫ್ಜಲ್ ವಿ.ಜೆ. ಮನೋಜ್, ರಣವೀರ್, ಯುಕ್ತ ಪೆರ್ವಿ, ಪೂಜಾ ಪಾಟೀಲ್ ಮುಂತಾದವರು ನಟಿಸುತ್ತಿದ್ದಾರೆ.
'ಸಿದ್ದಿಸೀರೆ' ಚಿತ್ರಕ್ಕಾಗಿ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಕಿಸ್ ಇಂಟರ್ ನ್ಯಾಷನಲ್ನ ನವೀನ್ ಕುಮಾರ್ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. ಅಫ್ಜಲ್ ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಕೆನಡಾದಲ್ಲಿ 'ಸಾರಿ' ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ನಡೆಯಲಿವೆ.