'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಪುಟ್ಟ ಗೌರಿಯಾಗಿ ನಟಿಸುವ ಮೂಲಕ ಕಿರುತೆರೆಯಲ್ಲಿ ಹೆಸರು ಮಾಡಿದ್ದ ಸಾನ್ಯಾ ಅಯ್ಯರ್ ಇದೀಗ ಮತ್ತೆ ನಟನೆಗೆ ವಾಪಸಾಗಿದ್ದಾರೆ. ಆದರೆ ಈ ಬಾರಿ ಅವರು ಕಿರುತೆರೆ ಬದಲು ಬೆಳ್ಳಿತೆರೆಯಲ್ಲಿ ಮಿಂಚಲು ಬರುತ್ತಿದ್ದಾರೆ.
ಅಮಿತ್ ರಾಜ್ ನಿರ್ದೇಶನದ 'ಗುಲಾಬ್ ಜಾಮೂನ್' ಚಿತ್ರದಲ್ಲಿ ಸಾನ್ಯಾ ನಾಯಕಿಯಾಗಿ ನಟಿಸುವ ಮೂಲಕ ಬಣ್ಣದ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಪುಟ್ಟಗೌರಿ ಮದುವೆಯ ನಂತರ ಸಾನ್ಯಾ ಯಾವ ಧಾರಾವಾಹಿಯಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಸಿನಿಮಾ ಮೂಲಕ ಅವರು ವಾಪಸ್ ಬಂದಿದ್ದಾರೆ. 'ಗುಲಾಬ್ ಜಾಮೂನ್' ಒಂದು ಪ್ರೇಮಕಥೆಯಾಗಿದ್ದು, ಇದರಲ್ಲಿ ಸಮಾಜಕ್ಕೆ ಉತ್ತಮ ಸಂದೇಶವೂ ಸಿಗಲಿದೆಯಂತೆ.
ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಸಾನ್ಯಾ ಅಯ್ಯರ್ ಇದೀಗ ಗುಲಾಬ್ ಜಾಮೂನ್ ಮೂಲಕ ಪೂರ್ಣ ಪ್ರಮಾಣದ ನಟಿಯಾಗಿ ಭಡ್ತಿ ಪಡೆಯುತ್ತಿರುವುದಕ್ಕೆ ಅಭಿಮಾನಿಗಳು ಕೂಡಾ ಸಂತೋಷ ವ್ಯಕ್ತಪಡಿಸಿದ್ದಾರೆ. ಸಾಕ್ಷಿ ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಕಿರುತೆರೆಗೆ ಬಂದ ಸಾನ್ಯಾ ಕುಸುಮಾಂಜಲಿ, ಸಿಂಧೂರ, ನಮ್ಮೂರ ಶಾರದೆ, ಅರಸಿ ಧಾರಾವಾಹಿಯಲ್ಲಿ ಕೂಡಾ ನಟಿಸಿದರು. ಆದರೆ ಸಾನ್ಯಾಗೆ ಹೆಸರು ತಂದುಕೊಟ್ಟದ್ದು ಮಾತ್ರ ಪುಟ್ಟಗೌರಿ ಮದುವೆ ಧಾರಾವಾಹಿಯ ಗೌರಿ ಪಾತ್ರ. ಅನು, ಬೆಳಕಿನೆಡೆಗೆ, ವಿಮುಕ್ತಿ ಸಿನಿಮಾದಲ್ಲಿ ಕೂಡಾ ಈ ಚೆಲುವೆ ನಟಿಸಿದ್ದು, ವಿಮುಕ್ತಿ ಸಿನಿಮಾಗಾಗಿ ಉತ್ತಮ ಬಾಲನಟಿ ಪ್ರಶಸ್ತಿ ಕೂಡಾ ಪಡೆದಿದ್ದಾರೆ.