ನಟ ಪುನೀತ್ ರಾಜ್ಕುಮಾರ್ ಅಗಲಿ ಇಂದಿಗೆ 11 ದಿನಗಳಾಗಿವೆ. ಈ ಹಿನ್ನೆಲೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್‍ಕುಮಾರ್ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸುತ್ತಿದ್ದಾರೆ.
ಪುನೀತ್ ಸಹೋದರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್, ಪುನೀತ್ ಪತ್ನಿ ಅಶ್ವಿನಿ ಹಾಗು ಮಕ್ಕಳು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ಮತ್ತೊಂದೆಡೆ ಸದಾಶಿವ ನಗರದಲ್ಲಿರುವ ನಿವಾಸದಲ್ಲಿ ಪುನೀತ್ ಪುಣ್ಯ ಸ್ಮರಣೆಗೆ ಕುಟುಂಬಸ್ಥರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಚಿತ್ರೋದ್ಯಮದ ಹಲವು ಗಣ್ಯರು, ಆಪ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಅಪ್ಪು ಅಮರ ಶ್ರೀ..
ಪೂಜೆ ಸಲ್ಲಿಸಿದ ನಂತರ ಮಾತನಾಡಿದ ನಟ, ಸಹೋದರ ಶಿವರಾಜ್ ಕುಮಾರ್, ಅಪ್ಪುನನ್ನ ಕಳೆದುಕೊಂಡಿದ್ದೇವೆ ಎಂದು ಈಗಲೂ ನಂಬಲು ಆಗುತ್ತಿಲ್ಲ. ತುಂಬಾ ನೋವಾಗುತ್ತಿದೆ. ಇಂದು ಪೂಜೆ ಮಾಡುವಾಗಲೂ ತುಂಬಾ ನೋವಾಯಿತು. ಯಾರಿಗೂ ತೊಂದರೆಯಾಗಬಾರದೆಂದು ಪೂಜೆ ಮಾಡಿದ್ದೇವೆ. ಬೆಳಗ್ಗೆ ವಿಧಿ ವಿಧಾನ ಮಾಡುವಾಗ ನಾವು ಇದೆಲ್ಲಾ ಅವನಿಗೆ ಮಾಡ್ಬೇಕಾ ಎನಿಸಿತು ಎಂದು ಬೇಸರ ವ್ಯಕ್ತಪಡಿಸಿದರು.
ಅಭಿಮಾನಿಗಳ ಬಗ್ಗೆ ಮಾತನಾಡಿದ ಅವರು, ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಅವನ ಹೆಸರು ಉಳಿಸಿ, ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಪ್ರಾಣ ಕಳೆದುಕೊಂಡರೆ ನಿಮ್ಮ ಕುಟುಂಬಕ್ಕೆ ನೋವಾಗುತ್ತದೆ ಎಂದು ಶಿವಣ್ಣ ಸಲಹೆ ನೀಡಿದರು.
ಪುನೀತ್ ರಾಜ್ಕುಮಾರ್ ಅವರಿಗೆ ಪದ್ಮಶ್ರೀ ನೀಡಬೇಕು ಎಂಬ ಎಂಬ ವಿಚಾರಕ್ಕೆ ಪ್ರಕ್ರಿಯಿಸಿದ ಶಿವಣ್ಣ, ಅವನು ಅಮರ ಶ್ರೀ.. ಆ ಶ್ರೀಗಿಂತ ಯಾವುದೂ ದೊಡ್ಡದಲ್ಲ ಎಂದರು.
ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ 11ನೇ ದಿನದ ಪುಣ್ಯ ತಿಥಿ ಕಾರ್ಯ