ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಪಾರು' ಯಶಸ್ವಿಯಾಗಿ 500 ಸಂಚಿಕೆಗಳನ್ನು ಪೂರೈಸಿದೆ. ಟಿಆರ್ಪಿಯಲ್ಲಿ ಟಾಪ್ 5ನೇ ಸ್ಥಾನ ಪಡೆದಿರುವ ಪಾರು, ವೀಕ್ಷಕರ ಮೆಚ್ಚಿನ ಧಾರಾವಾಹಿಯಾಗಿದೆ. ದಿಲೀಪ್ ರಾಜ್ ನಿರ್ಮಿಸುತ್ತಿರುವ ಈ ಧಾರಾವಾಹಿಯನ್ನು ಗುರುಪ್ರಸಾದ್ ನಿರ್ದೇಶಿಸುತ್ತಿದ್ದು, ಮಂಗಳೂರಿನ ಚೆಲುವೆ ಮೋಕ್ಷಿತಾ ಪೈ ಪಾರು ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಮೋಕ್ಷಿತಾ ಜೊತೆಯಾಗಿ ಆದಿ ಪಾತ್ರದಲ್ಲಿ ಶರತ್ ಪದ್ಮನಾಭ್ ನಟಿಸುತ್ತಿದ್ದಾರೆ. ಇದೀಗ ಈ ಧಾರಾವಾಹಿ ಟಾಪ್ 5ನೇ ಸ್ಥಾನಕ್ಕೆ ಏರಿದೆ. ಈ ಧಾರಾವಾಹಿ ಮೂಲಕ ಬಹಳ ದಿನಗಳ ನಂತರ ಆ್ಯಕ್ಟಿಂಗ್ಗೆ ವಾಪಸಾಗಿರುವ ವಿನಯ ಪ್ರಸಾದ್ ಅರಸನಕೋಟೆ ಅಖಿಲಾಂಡೇಶ್ವರಿ ಆಗಿ ಮೋಡಿ ಮಾಡುತ್ತಿದ್ದಾರೆ. ಅಖಿಲಾಂಡೇಶ್ವರಿ ಮನೆಯ ಕೆಲಸದಾಕೆ ಪಾರು, ತಾನು ಕೆಲಸ ಮಾಡುವ ಕುಟುಂಬದ ಒಳತಿಗಾಗಿ ಕೆಲಸ ಮಾಡುತ್ತಿರುತ್ತಾಳೆ. ತನ್ನ ಯಜಮಾನಿ ಅಖಿಲಾಂಡೇಶ್ವರಿಗಾಗಿ ಪ್ರಾಣವನ್ನೇ ನೀಡಲು ತಯಾರಾಗಿರುತ್ತಾಳೆ. ಈ ನಡುವೆ ಮನೆ ಒಡೆಯ ಆದಿಯನ್ನು ಪಾರು ಪ್ರೀತಿಸಲು ಆರಂಭಿಸುತ್ತಾಳೆ. ಪಾರು ಪ್ರೀತಿ ಸಫಲಗೊಳ್ಳುವುದಾ...? ಅಖಿಲಾಂಡೇಶ್ವರಿ ತನ್ನ ಡ್ರೈವರ್ ಮಗಳು ಪಾರುವನ್ನು ತನ್ನ ಸೊಸೆ ಎಂದು ಒಪ್ಪಿಕೊಳ್ಳುತ್ತಾರಾ...? ಎಂಬುದು ಮುಂದಿನ ದಿನಗಳಲ್ಲಿ ಉತ್ತರ ದೊರೆಯಲಿದೆ. ಇದು ತಮಿಳು ಧಾರಾವಾಹಿಯ ರೀಮೇಕ್ ಆಗಿದ್ದು ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಿ ವೀಕ್ಷಕರಿಗಾಗಿ ಪ್ರಸಾರ ಮಾಡಲಾಗುತ್ತಿದೆ.