ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿ 'ಪಾರು' 400 ಸಂಚಿಕೆಗಳನ್ನು ಪೂರೈಸಿದೆ. 'ಪಾರು' ಧಾರಾವಾಹಿ ತಂಡ ಇಂದು ಸೆಟ್ನಲ್ಲಿ ಕೇಕ್ ಕತ್ತರಿಸುವ ಮೂಲಕ ಧಾರಾವಾಹಿ 400 ಎಪಿಸೋಡ್ ಪೂರೈಸಿದ ಸಂಭ್ರಮವನ್ನು ಆಚರಿಸಿದರು.
ಸೆಟ್ನಲ್ಲಿ ಮೋಕ್ಷಿತಾ, ಎಸ್. ನಾರಾಯಣ್ ಹಾಗೂ ಬಾಲನಟಿ ಆರಾಧ್ಯ ಸೇರಿದಂತೆ ಹಲವರು ಕೇಕ್ ಕತ್ತರಿಸುವ ಮೂಲಕ ಖುಷಿ ಹಂಚಿಕೊಂಡರು. ದೊಡ್ಡ ಮನೆತನದ ಒಡತಿ ಅಖಿಲಾಂಡೇಶ್ವರಿ ಹಾಗೂ ಹಳ್ಳಿ ಹುಡುಗಿ ಪಾರು ನಡುವಿನ ಕಥೆಯೇ 'ಪಾರು' ಧಾರಾವಾಹಿ. ಹುಟ್ಟಿನಿಂದಲೇ ಶ್ರೀಮಂತಿಕೆಯನ್ನು ಹೊತ್ತು ತಂದ ಮಹಾರಾಣಿ ಅಖಿಲಾಂಡೇಶ್ವರಿ ಶಿಸ್ತಿನ ಸಿಪಾಯಿ. ಆ ಗ್ರಾಮದ ಜನರ ಪಾಲಿಗೆ ಸಿಂಹಿಣಿ ಇದ್ದಂತೆ. ಮಾತ್ರವಲ್ಲ, ಊರಿನ ಜನರಿಗೆ ಆಕೆ ಹೇಳಿದ್ದೇ ವೇದ ವಾಕ್ಯ.
ಇತ್ತ ಇರುವುದರಲ್ಲೇ ಬದುಕು ಕಂಡುಕೊಳ್ಳಬೇಕು, ಬದುಕನ್ನು ಪ್ರೀತಿಸಬೇಕು ಎಂಬ ನಿಲುವು ಪಾರುವಿನದು. ಇಂತಿಪ್ಪ ಪಾರು ಅರಸನಕೋಟೆ ಅಖಿಲಾಂಡೇಶ್ವರಿ ಮನೆಗೆ ಕಾಲಿಟ್ಟಾಗಿದೆ. ಶೂಟಿಂಗ್ ನೆಪದಲ್ಲಿ ಆದಿ ಕೈಯಿಂದ ತಾಳಿ ಕಟ್ಟಿಸಿಕೊಂಡಿದ್ದು ಆಗಿದೆ. ಈ ವಿಷಯ ಮನೆಯವರೆಲ್ಲರಿಗೂ ತಿಳಿದಿದ್ದರೂ ಶೂಟಿಂಗ್ ಮದುವೆ ಆದ ಕಾರಣ ಯಾರೂ ತಲೆ ಕೆಡಿಸಿಕೊಂಡಿಲ್ಲ. ಅಖಿಲಾಂಡೇಶ್ವರಿಗೆ ಅನುಷ್ಕಾಳನ್ನು ಮನೆ ಸೊಸೆ ಮಾಡಿಕೊಳ್ಳುವ ಆಸೆ. ಪಾರುವಿನ ಗುಣ ಅಖಿಲಾಂಡೇಶ್ವರಿಯ ಮನ ಗೆದ್ದರೂ ಅವಳನ್ನು ಸೊಸೆ ಮಾಡಿಕೊಳ್ಳುವ ಆಸೆ ಅವರಿಗಿಲ್ಲ. ವಿಧಿಯಾಟ ಬದಲಾಗಿ ಪಾರು ಆ ಮನೆ ಸೊಸೆಯಾಗುತ್ತಾಳಾ? ಆದಿತ್ಯ ಪಾರುವನ್ನು ಪ್ರೀತಿಸುತ್ತಾನಾ? ಆ ಜೋಡಿ ಒಂದಾಗುತ್ತಾರಾ ಎಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
ಕನ್ನಡದ ಹಿರಿಯ ನಟಿ ವಿನಯಾ ಪ್ರಸಾದ್, ಅರಸನಕೋಟೆ ಅಖಿಲಾಂಡೇಶ್ವರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕನ್ನಡದ ಹೆಸರಾಂತ ನಟ ನಿರ್ದೇಶಕ ಎಸ್. ನಾರಾಯಣ್ ಕೂಡಾ ರಣಕಲ್ ವೀರಯ್ಯನ ಪಾತ್ರಕ್ಕೆ ಜೀವ ತುಂಬಿದ್ದರು. ಆ ಮೂಲಕ ಬಹಳ ವರ್ಷಗಳ ಗ್ಯಾಪ್ ನಂತರ ನಾರಾಯಣ್ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದರು. ನಾಯಕಿ ಪಾರು ಆಗಿ ಮೋಕ್ಷಿತಾ ನಟಿಸಿದ್ದರೆ, ನಾಯಕ ಆದಿತ್ಯನಾಗಿ ಶರತ್ ಪದ್ಮನಾಭ್ ಅಭಿನಯಿಸಿದ್ದಾರೆ. ಉಳಿದಂತೆ ಸಿತಾರಾ, ಮಾನಸಿ ಜೋಶಿ, ಸಿದ್ದು ಮೂಲಿಮನಿ, ಪವಿತ್ರಾ ನಾಯ್ಕ್ ನಾಗೇಂದ್ರ ಶಾ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ.