ಬಾಲ್ಯದಿಂದಲೂ ಈತನಿಗಿದ್ದ ಬಯಕೆ ಅಂದ್ರೆ ಅದು ತಾನು ಕಲಾವಿದನಾಗಬೇಕು, ನಟನಾ ಜಗತ್ತಿನಲ್ಲಿ ಗುರುತಿಸಿಕೊಳ್ಳಬೇಕು ಅನ್ನೋದು. ಬಾಲ ಕಲಾವಿದನಾಗಿ ಕಿರುತೆರೆ ಲೋಕಕ್ಕೆ ಕಾಲಿಟ್ಟಾಗ ಕೇವಲ 6 ವರ್ಷ. 'ಟೈಂ ಪಾಸ್ ತೆನಾಲಿ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಲಾ ಜಗತ್ತಿಗೆ ಪರಿಚಿತನಾದ ಇವರ ನಿಜ ನಾಮಧೇಯ ನಿನಾದ್ ಹರಿತ್ಸ. ಸದ್ಯ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಾಗಿಣಿ- 2' ಧಾರವಾಹಿಯಲ್ಲಿ ತ್ರಿಶೂಲ್ ಪಾತ್ರಕ್ಕೆ ಜೀವ ತುಂಬುತ್ತಿರುವ ಇವರಿಗೆ ನಟನೆ ರಕ್ತಗತವಾಗಿ ಬಂದಿದೆ.
ನಿನಾದ್ ಅಪ್ಪ ಪ್ರಸನ್ನ ರಾವ್, ಅಮ್ಮ ಮಾಲಿನಿ ರಾವ್ ರಂಗಭೂಮಿ ಕಲಾವಿದರು. ಸಣ್ಣ ಪ್ರಾಯದಿಂದಲೂ ನಟನೆಯನ್ನೇ ನೋಡಿ ಬೆಳೆಯುತ್ತಿದ್ದ ನಿನಾದ್‌ಗೆ ಕಲೆಯೇ ಉಸಿರಾಯಿತು. ಅಂತೆಯೇ ಬಾಲ ಕಲಾವಿದನಾಗಿ ನಟಿಸಿದ ಮುದ್ದು ಮಗನನ್ನು ಓದಿನ ಸಲುವಾಗಿ ಅಪ್ಪ ಅಮ್ಮನೇ ನಟನೆಯಿಂದ ದೂರವಿಟ್ಟರಂತೆ. ಪೋಷಕರ ಆಶಯದಂತೆ ಓದು ಮುಗಿಸಿದ ನಿನಾದ್ ಮತ್ತೆ ಮುಖ ಮಾಡಿದ್ದು ರಂಗಭೂಮಿಯತ್ತ. ಆಗ ಹೋದ ಉಸಿರು ಮರಳಿ ಬಂದ ಅನುಭವ ಅವರಿಗೆ! ತಕ್ಷ್ ಥಿಯೇಟರ್ಸ್ ಎಂಬ ರಂಗತಂಡದ ಮೂಲಕ ನಾಟಕಗಳಲ್ಲಿ ಅಭಿನಯಿಸಿದ ಇವರು ಮುಂದೆ ಬೇರೆ ಬೇರೆ ರಂಗತಂಡಗಳಲ್ಲಿಯೂ ಕಾಣಿಸಿಕೊಂಡಿದ್ದರು. ನಾಟಕಗಳಲ್ಲಿ ಬಣ್ಣ ಹಚ್ಚುವ ಮೂಲಕ ರಂಗಭೂಮಿಯಲ್ಲಿ ಸುಮಾರು 7 ವರ್ಷಗಳ ಕಾಲ ಪಳಗಿ ಮತ್ತೆ ಕಿರುತೆರೆಯತ್ತ ಪ್ರಯಾಣ ಮಾಡುತ್ತಾರೆ. ಈ ವೇಳೆ ಮಗನ ನಿರ್ಧಾರಕ್ಕೆ ಅಪ್ಪ-ಅಮ್ಮ ಅಸ್ತು ಎಂದಿದ್ದರಂತೆ.
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅರಮನೆ' ಧಾರಾವಾಹಿಯಲ್ಲಿ ನಾಯಕಿಯ ತಮ್ಮನಾಗಿ ನಟಿಸುವ ಮೂಲಕ ಮರಳಿ ಕಿರುತೆರೆಗೆ ಬರುವ ನಿನಾದ್ ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬಿಳಿ ಹೆಂಡ್ತಿ' ಧಾರಾವಾಹಿಯಲ್ಲಿ ಅಗಸ್ತ್ಯನ ಪಾತ್ರಕ್ಕೆ ಜೀವ ತುಂಬಿದ್ದು, ಸದ್ಯ ನಾಗಿಣಿಯ ತ್ರಿಶೂಲ್ ಆಗಿ ಬ್ಯುಸಿಯಾಗಿದ್ದಾರೆ. ನಾನು ಈಗಾಗಲೇ ಅರಮನೆ, ಬಿಳಿ ಹೆಂಡ್ತಿ ಧಾರಾವಾಹಿಯಲ್ಲಿ ಅಭಿನಯಿಸಿದ್ದೇನೆ ಆದರೂ ಜನ ನನ್ನನ್ನು ಗುರುತಿಸುವುದು ತ್ರಿಶೂಲ್ ಪಾತ್ರದ ಮೂಲಕವೇ. ಇಷ್ಟು ಬೇಗ ಜನ ನನ್ನನ್ನು ಸ್ವೀಕರಿಸಿದ್ದಾರೆ, ನನ್ನ ಪಾತ್ರವನ್ನು ಮೆಚ್ಚಿದ್ದಾರೆ ಎಂದರೆ ಇದಕ್ಕಿಂತ ಸಂತಸದ ವಿಚಾರ ಬೇರೇನಿದೆ? ಎಂದು ನಗುನಗುತ್ತಾ ಹೇಳುವ ನಿನಾದ್, ಕಿರುಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಸುಮಾರು 13 ಕಿರುಚಿತ್ರಗಳಲ್ಲಿ ನಟಿಸಿರುವ ಇವರ ರೆಕಮಂಡೇಶನ್ ಎನ್ನುವ ಕಿರುಚಿತ್ರ 70,000 ವೀಕ್ಷಣೆ ಪಡೆದಿದೆ. ಮಾತ್ರವಲ್ಲ, 'ಪ್ರಯಾಣಿಕರ ಗಮನಕ್ಕೆ' ಸಿನಿಮಾದಲ್ಲಿ ಶ್ರೀಪಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಉತ್ತಮ ಅವಕಾಶ ದೊರೆತರೆ ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲೂ ನಟಿಸುವ ಇರಾದೆ ನಿನಾದ್ ಅವರದ್ದಾಗಿದೆ.