ಪಾಪಿ ಕಲಿಗಾಲ ಕೆಟ್ಟೋಯ್ತಯ್ಯ...ಗಂಡಸರಿಗೆ ಮಕ್ಕಳಾಗೊ ಕಾಲ ಬಂತಯ್ಯ ಎಂಬ ಹಾಡನ್ನು ನೀವು ಕೇಳಿರುತ್ತೀರಿ. ಇದೀಗ ಈ ಹಾಡಿನಂತೆ ಗರ್ಭ ಧರಿಸಿದ ಪುರುಷನ ಕಥೆಯನ್ನು ಮೊದಲ ಬಾರಿಗೆ ಕನ್ನಡದ ವೆಬ್ ಸೀರೀಸ್ ಒಂದರಲ್ಲಿ ತೋರಿಸುವ ತಯಾರಿ ನಡೆದಿದೆ.
ಗರ್ಭ ಧರಿಸಿದ ಮಹಿಳೆಯನ್ನು ಪರೀಕ್ಷಿಸಿದ ವೈದ್ಯರು ನಿಮಗೊಂದು ಸಿಹಿಸುದ್ದಿ ಎನ್ನುವಂತೆಯೇ ಒಬ್ಬ ಪುರುಷನನ್ನು ಟೆಸ್ಟ್ ಮಾಡಿದ ನಂತರ ಸ್ವೀಟ್ ನ್ಯೂಸ್ ಫಾರ್ ಯು ಎಂದರೆ ಆತನ ಪರಿಸ್ಥಿತಿ ಹೇಗಾಗಬೇಡ..? ಪುರುಷ ಗರ್ಭ ಧರಿಸುತ್ತಾನೆ ಎಂಬ ಕಲ್ಪನೆಯೇ ಒಂದು ರೀತಿ ವಿಲಕ್ಷಣ ಎನ್ನುವ ವಾತಾವರಣವೇ ಈ ಕ್ಷಣಕ್ಕೂ ವಿಶ್ವಾದ್ಯಂತ ಚಾಲ್ತಿಯಲ್ಲಿದೆ. ಹೀಗಿರುವಾಗ ಅದನ್ನು ವೆಬ್ ಸರಣಿಯೊಂದಕ್ಕೆ ಕಥೆಯನ್ನಾಗಿ ಬಳಸಿಕೊಂಡಿರುವ ತಂಡದ ಧೈರ್ಯವನ್ನು ಮೆಚ್ಚಲೇಬೇಕು.
ಈಗಾಗಲೇ 'ನಿಮೊಗೊಂದು ಸಿಹಿ ಸುದ್ದಿ' ಪೋಸ್ಟರ್ ಬಿಡುಗಡೆಯಾಗಿದ್ದು ಸೋಷಿಯಲ್ ಮೀಡಿಯಾದ್ಯಂತ ಹರಿದಾಡುತ್ತಿದೆ. ಕನ್ನಡದ ಮಟ್ಟಿಗೆ ಇದು ಹೊಸ ಕಾನ್ಸೆಪ್ಟ್ ಆಗಿರುವುದರಿಂದ ಈ ಸೀರೀಸ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಒಂದೇ ದಿನದಲ್ಲಿ ಸುಮಾರು 8 ಲಕ್ಷ ಮಂದಿ ಈ ಪೋಸ್ಟರ್ ವೀಕ್ಷಿಸಿದ್ದಾರೆ.
ಈ ಸೀರೀಸ್ನಲ್ಲಿ ಅರ್ಜುನ್ ಮತ್ತು ಡಿಡಿ ಎಂಬ ಇಬ್ಬರು ಸ್ನೇಹಿತರು ಇರುತ್ತಾರೆ. ಅದರಲ್ಲಿ ಅರ್ಜುನ್ ಸೆಲಬ್ರಿಟಿಯೊಬ್ಬರ ಮನೆಯಲ್ಲಿ ಕುಕ್ ಆಗಿ ಕೆಲಸ ಮಾಡುತ್ತಿರುತ್ತಾನೆ. ಆದರೆ ಒಂದು ದಿನ ಅರ್ಜುನ್ ಗರ್ಭ ಧರಿಸಿರುವ ವಿಚಾರ ಹೊರಬೀಳುತ್ತದೆ. ಈ ಯುವಕ ಗರ್ಭ ಧರಿಸಿದ್ದು ಹೇಗೆ..? ಇದಕ್ಕೆ ಆತನ ಪ್ರಿಯತಮೆ ಹೇಗೆ ಪ್ರತಿಕ್ರಿಯಿಸುತ್ತಾಳೆ...?ನಂತರ ಏನೆಲ್ಲಾ ಅವಾಂತರಗಳು ಸೃಷ್ಟಿಯಾಗುತ್ತವೆ ಎಂಬ ಕಥೆ ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸುವುದು ಖಂಡಿತ. ಈ ಕಾಮಿಡಿ ಸರಣಿ ಸುಮಾರು 8 ಎಪಿಸೋಡ್ಗಳನ್ನು ಒಳಗೊಂಡಿದೆ.
ಗೋಲ್ಡ್ ಚೈನ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಹೊಸ ಪ್ರಯೋಗವಿದು. ಉಪೇಂದ್ರ ಅವರ 'ಟೋಪಿವಾಲಾ' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಸುಧೀಂದ್ರ ನಾಡಿಗರ್. ಆರ್ ಈ ವೆಬ್ ಸೀರೀಸ್ ಮೂಲಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ರಂಗಭೂಮಿ ಹಿನ್ನೆಲೆಯ ಹೊಸ ಪ್ರತಿಭೆ ರಘು ಭಟ್ ಗರ್ಭ ಧರಿಸಿದ ಪುರುಷನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
'ಇಷ್ಟಕಾಮ್ಯ' ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಕಾವ್ಯ ಶೆಟ್ಟಿ ಈ ಸೀರೀಸ್ನಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 'ಊರ್ವಿ' ಸಿನಿಮಾ ಮೂಲಕ ಛಾಯಾಗ್ರಹಣದಲ್ಲಿ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟ ಆನಂದ್ ಸುಂದರೇಶ್ ಛಾಯಾಗ್ರಹಣ ಈ ಸೀರೀಸ್ಗೆ ಇದೆ. ಈ ಕ್ರಿಯೇಟೀವ್ ತಂಡದಲ್ಲಿ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣ ಹಾಗೂ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವ ಪ್ರಿಯಾಂಕಾ ಎಂ.ಆರ್, ಜಗದೀಶ್ ಸಿಂಗ್, ಯೋಗೇಶ್ ನಂಜಪ್ಪ, ಪ್ರಕಾಶ್ ಎಸ್.ಆರ್, ಅನಿಲ್ ಕುಮಾರ್, ಅಕ್ಷೋಭ್ಯಾ, ಪ್ರಶಾಂತ್. ಆರ್ ಮತ್ತು ಮಂಜುನಾಥ್ ಸಿಂಗ್, ಪ್ರಜ್ವಲ್ ಮುದ್ದಿ ಹಾಗೂ ಇನ್ನಿತರರು ಕೆಲಸ ಮಾಡಲಿದ್ದಾರೆ.
ಕಾಫಿ ಡೇ, ಈ ಸರಣಿಯ ಬ್ರಾಂಡ್ ಪಾರ್ಟ್ನರ್ ಕೂಡಾ ಆಗಿರುವುದರಿಂದ 'ನಿಮಗೊಂದು ಸಿಹಿ ಸುದ್ದಿ' ಪೋಸ್ಟರನ್ನು ಕಾಫಿ ಡೇಯಲ್ಲಿ ವಿನೂತನವಾಗಿ ಅನಾವರಣ ಮಾಡಲಾಗಿದೆ. ಜನಸಾಮಾನ್ಯರು ತಾವು ಇದ್ದ ಸ್ಥಳದಿಂದಲೇ ಸ್ಕ್ರಾಚ್ ಕಾರ್ಡ್ ಲಿಂಕ್ ಷೇರ್ ಮಾಡುವ ಮೂಲಕ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.
ಬದಲಾಗುತ್ತಿರುವ ಕಾಲಘಟ್ಟದಲ್ಲಿ ಜನ ಪ್ರತಿಯೊಂದರಲ್ಲೂ ಹೊಸತನವನ್ನು ನಿರೀಕ್ಷಿಸುತ್ತಿದ್ದಾರೆ. ಈ ಹೊಸತನದ ಪರಿಕಲ್ಪನೆಗೆ ತಕ್ಕಂತೆ ಯುವ ಪ್ರತಿಭೆಗಳು ಜೊತೆ ಸೇರಿ 'ನಿಮಗೊಂದು ಸಿಹಿ ಸುದ್ದಿ' ನೀಡಲು ಮುಂದಾಗಿದೆ. ಸದ್ಯ ಪೋಸ್ಟರ್ ಎಲ್ಲರ ಕುತೂಹಲ ಕೆರಳಿಸಿದ್ದು ಸೀರೀಸ್ ನೋಡಲು ಕಾತರದಿಂದ ಕಾಯುತ್ತಿದ್ದಾರೆ.