ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಕಸ್ತೂರಿ ನಿವಾಸ' ಧಾರಾವಾಹಿ ಯಶಸ್ವಿ 250 ಸಂಚಿಕೆಗಳನ್ನು ಪೂರೈಸಿದೆ. ಈ ಧಾರಾವಾಹಿ ಕಿರುತೆರೆ ವೀಕ್ಷಕರಿಗೆ ಬಹಳ ಇಷ್ಟವಾಗಿದೆ ಎನ್ನುವುದಕ್ಕೆ 250 ಸಂಚಿಕೆಗಳನ್ನು ಪೂರೈಸಿರುವುದೇ ಸಾಕ್ಷಿ. ಅತ್ತೆ ಸೊಸೆ ಬಾಂಧವ್ಯ, ಅಮ್ಮ ಮಗಳ ನಂಟು, ತಾಯಿ ಮಗನ ವಾತ್ಸಲ್ಯ ಹೀಗೆ ಎಲ್ಲಾ ಮೌಲ್ಯಗಳನ್ನು ಈ ಧಾರಾವಾಹಿಯಲ್ಲಿ ತೋರಿಸಲಾಗುತ್ತಿದೆ.
ಕಥೆಯಲ್ಲಿ ಇದೀಗ ತಿರುವು ಸಿಗಲಿದ್ದು ಧಾರಾವಾಹಿಗೆ ಹೊಸ ಪಾತ್ರದ ಆಗಮನವಾಗಿದೆ. ವಸಿಷ್ಠ ಎಂಬ ಪಾತ್ರದ ಮೂಲಕ ನಟ ಚಂದ್ರು ಈ ಧಾರಾವಾಹಿಗೆ ಎಂಟ್ರಿ ಕೊಡುತ್ತಿದ್ದಾರೆ. ದೂರಾಗಿದ್ದ ಅತ್ತೆ ಸೊಸೆ ಒಂದಾದರು. ಮೃದುಲಾ ಹಾಗೂ ರಾಘವ ಕೂಡಾ ಜೊತೆಯಾದ್ರು. ಇದೆಲ್ಲದರ ಜೊತೆ ಮಾಧುರಿ ಮಗಳು ಮೃದುಲಾ ಎಂಬ ಸತ್ಯ ಎಲ್ಲರಿಗೂ ತಿಳಿಯಬೇಕು ಎನ್ನುವಷ್ಟರಲ್ಲಿ ಕಥೆಗೆ ಟ್ವಿಸ್ಟ್ ನೀಡಲು ವಸಿಷ್ಠನ ಪಾತ್ರದ ಆಗಮನವಾಗಿದೆ. 'ಈ ಪಾತ್ರದ ಮೂಲಕ ಮತ್ತೆ ಕಿರುತೆರೆಗೆ ಬಂದಿರುವ ಖುಷಿ ಇದೆ. ವಸಿಷ್ಠ ಪಾತ್ರದಲ್ಲಿ ಬಹಳ ಥ್ರಿಲ್ ಇದೆ. ಅದು ಏನೆಂಬುದು ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ' ಎನ್ನುತ್ತಾರೆ ಚಂದ್ರು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 7 ಗಂಟೆಗೆ ಉದಯ ಟಿವಿಯಲ್ಲಿ 'ಕಸ್ತೂರಿ ನಿವಾಸ' ಧಾರಾವಾಹಿ ಪ್ರಸಾರವಾಗುತ್ತಿದೆ.