ಯಶೋಧ ಧಾರಾವಾಹಿಯ ಯಶು ಪಾತ್ರದಲ್ಲಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ನೀತಾ ಅಶೋಕ್ ಬಣ್ಣದ ಲೋಕಕ್ಕೆ ಬಂದಿರುವುದು ಅನಿರೀಕ್ಷಿತ. ಮೊದಲ ಧಾರಾವಾಹಿಯಲ್ಲೇ ಧಾರಾವಾಹಿಪ್ರಿಯರ ಮನ ಸೆಳೆದ ಈ ಹುಡುಗಿಯನ್ನು ಇಂದು ಎಲ್ಲರೂ ಗುರುತಿಸುತ್ತಾರೆ.
ನಿರ್ದೇಶಕ ವಿನೋದ್ ಧೊಂಡಾಳೆ ತಮ್ಮ ಧಾರಾವಾಹಿಗೆ ಹೊಸಬರನ್ನು ಹುಡುಕುತ್ತಿದ್ದರು. ಅದೇ ಸಮಯಕ್ಕೆ ಸಿಕ್ಕವರು ನೀತಾ ಅಶೋಕ್. ಫೇಸ್ಬುಕ್ನಲ್ಲಿ ನೀತಾ ಅಶೋಕ್ ಫೋಟೋಗಳನ್ನು ನೋಡಿದ ನಿರ್ದೇಶಕ ವಿನೋದ್ ಧಾರಾವಾಹಿಯಲ್ಲಿ ನಟಿಸುವ ಅವಕಾಶ ನೀಡಿದರು. ಬಾಲ್ಯದಲ್ಲೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ನೀತಾ, ನಟಿಸುವ ಅವಕಾಶ ದೊರೆತಾಗ ನಿರಾಕರಿಸಲಿಲ್ಲ. ಯಶೋಧ ಧಾರಾವಾಹಿಯ ಯಶು ಆಗಿ ನಟನಾ ಲೋಕಕ್ಕೆ ಬಂದ ನೀತಾ, ನಂತರ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ನಾಯಕಿ ನಂದಿನಿ ಆಗಿ ನಟಿಸಿದರು. ಜೊತೆಗೆ 'ನೀಲಾಂಬರಿ' ಹಾರರ್ ಧಾರಾವಾಹಿಯಲ್ಲೂ ನಾಯಕಿಯಾಗಿ ನಟಿಸಿದ್ದಾರೆ.
ನಟನೆಗೆ ಬರುವ ಮುನ್ನ ನೀತಾ ಮಾಡೆಲಿಂಗ್ ಮಾಡುತ್ತಿದ್ದರು. ಕೆಲವೊಂದು ಜಾಹೀರಾತುಗಳಿಗೆ ರೂಪದರ್ಶಿಯಾಗಿಯೂ ಕಾಣಿಸಿಕೊಂಡಿದ್ದ ನೀತಾ. ತುಳು ಸಿನಿಮಾ 'ಜಬರ್ದಸ್ತ್'ನಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕೋಸ್ಟಲ್ವುಡ್ನಲ್ಲೂ ಗುರುತಿಸಿಕೊಂಡಿದ್ದಾರೆ. ಇದೀಗ ಕನ್ನಡ ಸಿನಿಮಾಗಳಲ್ಲೂ ನೀತಾ ನಟಿಸುತ್ತಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಫ್ಯಾಂಟಮ್' ಸಿನಿಮಾದ ಮೂವರು ನಾಯಕಿಯರಲ್ಲಿ ಅಪರ್ಣಾ ಬಲ್ಲಾಳ್ ಆಗಿ ನೀತಾ ನಟಿಸುತ್ತಿದ್ದಾರೆ. ಫ್ಯಾಂಟಮ್ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿದ್ದೇನೆ. ಈ ಪಾತ್ರ ನಿಜಕ್ಕೂ ವಿಭಿನ್ನವಾಗಿದೆ. ಜವಾಬ್ದಾರಿ ಕೂಡಾ ಹೆಚ್ಚಾಗಿದೆ ಎನ್ನುತ್ತಾರೆ ನಿತಾ.