ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೇವಂತಿ ಧಾರಾವಾಹಿಯಲ್ಲಿ ನಾಯಕಿ ಸೇವಂತಿಯಾಗಿ ನಟಿಸುತ್ತಿದ್ದ ಪಲ್ಲವಿ ಗೌಡ ನಟನೆಗೆ ಬಾಯ್ ಹೇಳಿದ್ದು, ಇದೀಗ ಆ ಜಾಗಕ್ಕೆ ಮೇಘನಾ ಗೌಡ ಬಂದಿದ್ದಾರೆ.
ಅಂದ ಹಾಗೇ ಉದಯ ವಾಹಿನಿಯ ಪ್ರೇಕ್ಷಕರಿಗೆಲ್ಲಾ ಮೇಘನಾ ಮೊದಲೇ ಪರಿಚಿತರು. ಈ ಮೊದಲು ಉದಯ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ 'ಅವಳು ಕಥೆಯಾದವಳು' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿ ಮನೆ ಮಾತಾಗಿದ್ದರು.
ಅವಳು ಧಾರಾವಾಹಿಯ ನಂತರ ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದ ಮೇಘನಾ, ಇದೀಗ ಸೇವಂತಿಯಾಗಿ ಮತ್ತೊಮ್ಮೆ ಕನ್ನಡ ಕಿರುತೆರೆಗೆ ಮರಳಿದ್ದಾರೆ. ಆಕಸ್ಮಿಕವಾಗಿ ನಟನಾ ಲೋಕಕ್ಕೆ ಬಂದ ಮೇಘನಾಗೆ ನಿರೂಪಕಿಯಾಗಬೇಕು ಎಂಬ ಬಯಕೆಯಿತ್ತು. ಫೇಸ್ಬುಕ್ನಲ್ಲಿ ಮೇಘನಾ ಫೋಟೋ ನೋಡಿದ ನಿರ್ದೇಶಕ ರವಿಗರಣಿ, 'ಧಾರಾವಾಹಿಯಲ್ಲಿ ನಟಿಸುತ್ತೀರಾ' ಎಂದು ಕೇಳಿದ ಒಂದು ಪ್ರಶ್ನೆ ಇಂದು ಮೇಘನಾ ಅವರನ್ನು ಬಣ್ಣದ ಜಗತ್ತಿನಲ್ಲಿ ಮಿನುಗುವಂತೆ ಮಾಡಿದೆ.
ಉತ್ತರ ಕರ್ನಾಟಕದ ಸೊಗಡಿನ ಭಾಷೆಯನ್ನೊಳಗೊಂಡ ಅರಗಿಣಿ ಧಾರಾವಾಹಿಯಲ್ಲಿ ನಾಯಕಿ ಖುಷಿ ಆಗಿ ನಟಿಸಿ ಸೈ ಎನಿಸಿಕೊಂಡ ಮೇಘನಾಗೆ ಮೊದಲ ಬಾರಿ ಕ್ಯಾಮೆರಾ ಎದುರಿಸಿದಾಗ ಕೊಂಚ ಭಯವಾಗಿತ್ತು. ಹಿರಿಯ ಕಲಾವಿದರುಗಳ ನಡುವೆ ನಟಿಸುವುದು ಹೇಗೆ ಎಂಬ ಅಳುಕು ಕಾಡುತ್ತಿತ್ತು. ಆದರೆ, ರವಿ ಗರಣಿ ಮತ್ತು ಹಿರಿಯ ಕಲಾವಿದರುಗಳಿಂದ ಎಲ್ಲವನ್ನು ಸುಲಲಿತವಾಗಿ ಕಲಿತೆ ಎನ್ನುತ್ತಾರೆ ಮೇಘನಾ.