ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಅಗ್ನಿಸಾಕ್ಷಿ' ಕನ್ನಡ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿಮಾಡಿತ್ತು. ಸತತ 7ವರ್ಷಗಳಿಂದ ಕಿರುತೆರೆ ವೀಕ್ಷಕರನ್ನು ರಂಜಿಸಿದ 'ಅಗ್ನಿಸಾಕ್ಷಿ' ತೆಲುಗು ಭಾಷೆಗೆ ಡಬ್ ಆಗಿ ಪ್ರಸಾರವಾಗುತ್ತಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದ ವಿಚಾರ. ಇದೀಗ ಮತ್ತೊಂದು ಕನ್ನಡ ಧಾರಾವಾಹಿ ಬೇರೆ ಭಾಷೆಗೆ ಡಬ್ ಆಗುತ್ತಿದೆ.
ಡಬ್ಬಿಂಗ್ ವಿಚಾರ ಬಂದಾಗ ಮೊದಲು ನೆನಪಾಗುವುದು ಸಿನಿಮಾಗಳು. ಪರಭಾಷೆ ಸಿನಿಮಾಗಳು ಕನ್ನಡ ಭಾಷೆಗೆ ಡಬ್ ಆಗುವುದು, ಕನ್ನಡ ಭಾಷೆಯ ಸಿನಿಮಾಗಳು ಪರಭಾಷೆಗೆ ಡಬ್ ಆಗುವುದು ಮಾಮೂಲು ಸಂಗತಿ. ಇದೀಗ ಸೀರಿಯಲ್ ಕೂಡಾ ಡಬ್ ಆಗುವ ಕಾಲ ಬಂದಿದೆ. 'ಅಗ್ನಿಸಾಕ್ಷಿ' ಧಾರಾವಾಹಿಯ ಜೊತೆಗೆ ಇದೀಗ ಮತ್ತೊಂದು ಧಾರಾವಾಹಿ ಪರಭಾಷೆಗೆ ಡಬ್ ಆಗುತ್ತಿದೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಘುಚರಣ್ ನಿರ್ದೇಶನದ 'ಮಾಂಗಲ್ಯಂ ತಂತುನಾನೇನ' ಧಾರಾವಾಹಿ ಒಡಿಯಾ ಭಾಷೆಗೆ ಡಬ್ಬಿಂಗ್ ಆಗುತ್ತಿದೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರತಿದಿನ ರಾತ್ರಿ ಪ್ರಸಾರವಾಗುತ್ತಿರುವ, ವಿಭಿನ್ನ ಕಥಾ ಹಂದರವಿರುವ ಈ ಧಾರಾವಾಹಿಯನ್ನು ಈಗ ಒಡಿಶಾ ಪ್ರೇಕ್ಷಕರು ಕೂಡಾ ನೋಡಲಿದ್ದಾರೆ. ಇತ್ತೀಚೆಗಷ್ಟೇ ಯಶಸ್ವಿ 300 ಸಂಚಿಕೆಗಳನ್ನು ಪೂರೈಸಿರುವ 'ಮಾಂಗಲ್ಯಂ ತಂತುನಾನೇನ' ಧಾರಾವಾಹಿಯಲ್ಲಿ ನಾಯಕ ತೇಜಸ್ವಿಯಾಗಿ ಚಂದನ್ ನಟಿಸಿದ್ದರೆ, ನಾಯಕಿ ಶ್ರಾವಣಿ ಆಗಿ ದಿವ್ಯಾ ಅಭಿನಯಿಸುತ್ತಿದ್ದಾರೆ.