ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿನ ಸೌಂದರ್ಯ ಪಾತ್ರಧಾರಿ ಬದಲಾಗಿದ್ದಾರೆ. ಲಾಕ್ಡೌನ್ ಮುಗಿದು ಕಳೆದ ವಾರದಿಂದ ಶೂಟಿಂಗ್ ಆರಂಭವಾಗಿ ನಿನ್ನೆಯಿಂದ ಹೊಸ ಎಪಿಸೋಡ್ಗಳು ಪ್ರಸಾರವಾಗುತ್ತಿವೆ.
ನಾಯಕನ ಅತ್ತಿಗೆ ಆಲಿಯಾಸ್ ವಿಲನ್ ಆಗಿ ನಟಿಸುತ್ತಿದ್ದ ಸೌಂದರ್ಯ ಪಾತ್ರ ಬದಲಾಗಿದ್ದು ಆ ಜಾಗಕ್ಕೆ ಹೊಸ ನಟಿಯ ಎಂಟ್ರಿ ಕೂಡಾ ಆಗಿದೆ. ಈ ಮುನ್ನ ಸೌಂದರ್ಯ ಆಗಿ ರಾಧಿಕಾ ಮಿಂಚು ನಟಿಸುತ್ತಿದ್ದರು. ಈಗ ಅವರು ಪಾತ್ರದಿಂದ ಹೊರಬಂದಿದ್ದಾರೆ. ಆ ಜಾಗಕ್ಕೆ ತನಿಷಾ ಕುಪ್ಪಂಡ ಅವರು ಬಂದಿದ್ದಾರೆ. ತನಿಷಾ ಅವರಿಗೆ ಕಿರುತೆರೆ ಲೋಕ ಹೊಸದೇನಲ್ಲ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ತಾಪ್ಸಿ ಪಾತ್ರದಲ್ಲಿ ಅಭಿನಯಿಸುತ್ತಿರುವ ತನಿಷಾ, ನಿರೂಪಕಿಯಾಗಿಯೂ ಗುರುತಿಸಿಕೊಂಡ ಚೆಲುವೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಗ್ಸೋ ಚಾಲೆಂಜ್' ಕಾರ್ಯಕ್ರಮದ ನಿರೂಪಣೆ ಮಾಡಿ ಸೈ ಎನಿಸಿಕೊಂಡಿರುವ ತನಿಷಾ ಬಿಬಿಎಂ ಪದವಿಧರೆ.
ಬಾಲ್ಯದಿಂದಲೂ ನಟನೆಯತ್ತ ವಿಶೇಷ ಒಲವು ಹೊಂದಿದ್ದ ತನಿಷಾಗೆ ಬಣ್ಣದ ಲೋಕದಲ್ಲಿ ಮಿಂಚುವ ಕನಸಿತ್ತು. ಬೆಳ್ಳಿತೆರೆ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ತನಿಷಾ ಮೊದಲು ಕಾಣಿಸಿಕೊಂಡಿದ್ದು ತಂಗಿ ಪಾತ್ರದಲ್ಲಿ. 'ಪಾರಿಜಾತ' ಸಿನಿಮಾದಲ್ಲಿ ನಾಯಕ ದಿಗಂತ್ ತಂಗಿಯಾಗಿ ನಟಿಯಾಗಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಮುನ್ನುಡಿ ಬರೆದ ತನಿಷಾ ನಂತರ ರೋಮಿಯೋ, ದೇವ್ ಸನ್ ಆಫ್ ಮುದ್ದೇಗೌಡ, ಗೋಕುಲ ಕೃಷ್ಣ, 9 ಹಿಲ್ಟನ್ ಹೌಸ್, ಮೇಘಾ ಆಲಿಯಾಸ್ ಮ್ಯಾಗಿ ಸೇರಿ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಬೆಳ್ಳಿತೆರೆಯಿಂದ ಕಿರುತೆರೆಗೂ ಬಂದ ತನಿಷಾ ಮಾಯಾ, ಸರಯೂ, ಮಂಗಳಗೌರಿ, ವಾರಾಸ್ದಾರ, ಸಾಕ್ಷಿ, ದುರ್ಗಾ, ಪ್ರೀತಿ ಎಂದರೇನು, ಪುಟ್ಮಲ್ಲಿ, ಅಶ್ವಿನಿ ನಕ್ಷತ್ರ, ಓಂ ಶಕ್ತಿ ಓಂ ಶಾಂತಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈಕೆ ಕೇವಲ ಕನ್ನಡ ಕಿರುತೆರೆಗೆ ಮಾತ್ರವಲ್ಲದೆ ಪರಭಾಷೆಯಲ್ಲೂ ಪರಿಚಿತ ಮುಖ. ತಮಿಳು ಸೂಪರ್ ನ್ಯಾಚುರಲ್ ಧಾರಾವಾಹಿ ನೀಲಿಯಲ್ಲಿ ತುಳಸಿಯಾಗಿ ಅಭಿನಯಿಸಿರುವ ತನಿಷಾಗೆ 'ಸತ್ಯಂ ಶಿವಂ ಸುಂದರಂ' ನ ತಾಪ್ಸಿ ಪಾತ್ರ ಹೆಸರು ತಂದುಕೊಟ್ಟಿದೆ. ಇದೀಗ ಮತ್ತೆ ಸೌಂದರ್ಯ ಆಗಿ ನೆಗೆಟಿವ್ ಪಾತ್ರದತ್ತ ಮುಖ ಮಾಡಿರುವ ತನಿಷಾ ಇಲ್ಲಿ ಸಕ್ಸಸ್ ಪಡೆಯುತ್ತಾರಾ ಕಾದು ನೋಡಬೇಕಾಗಿದೆ.