ಜೀ ಕನ್ನಡ ವಾಹಿನಿಯಲ್ಲಿ ಶನಿವಾರ ಹಾಗೂ ಭಾನುವಾರ ಪ್ರಸಾರವಾಗುತ್ತಿದ್ದ ಡಾ. ಬಿ.ಆರ್ ಅಂಬೇಡ್ಕರ್ ಕುರಿತಾದ 'ಮಹಾನಾಯಕ' ಧಾರಾವಾಹಿ ಪ್ರಸಾರದ ಸಮಯ ಬದಲಾವಣೆಯಾಗಿದೆ. ವೀಕ್ಷಕರ ಒತ್ತಾಯದ ಮೇರೆಗೆ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6:00 ಗಂಟೆಗೆ ಪ್ರಸಾರವಾಗಲಿದೆ.

ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಬಾಲ್ಯದಿಂದಲೇ ಅಸ್ಪೃಶ್ಯತೆಯ ಸಂಕಷ್ಟ ಎದುರಿಸಿದರೂ ಅದರಿಂದ ಕಂಗೆಡದೆ ತಮ್ಮ ವಿದ್ಯಾಭ್ಯಾಸ ಪೂರೈಸಿ, ಶೋಷಿತರ ಹಕ್ಕುಗಳನ್ನು ಪ್ರತಿಪಾದಿಸುವ, ಅವರ ಸ್ವಾತಂತ್ರ್ಯಕ್ಕಾಗಿ ಹೋರಾಡುವ ನಾಯಕನಾಗಿ ಬೆಳೆಯುತ್ತಾರೆ. ಸ್ವಾತಂತ್ರ್ಯ ಭಾರತದಲ್ಲಿ ಕಾನೂನು ಸಚಿವರಾಗಿ, ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಅವರ ಕೊಡುಗೆ ಅನುಪಮವಾದುದು. ಅವರ ಸೇವೆಯನ್ನು ಗುರುತಿಸಿ 1990ರಲ್ಲಿ ಮರಣೋತ್ತರವಾಗಿ ಅವರಿಗೆ 'ಭಾರತ ರತ್ನ' ನೀಡಿ ಪುರಸ್ಕರಿಸಲಾಗಿದೆ.

ಮಹಾನಾಯ ಧಾರಾವಾಹಿಯ ಶೀರ್ಷಿಕೆ ಗೀತೆಯ ಕಾಲರ್ ಟ್ಯೂನ್ ಬಿಡುಗಡೆ ಮಾಡಲಾಗಿದೆ. ಧಾರಾವಾಹಿಯ ಪೋಸ್ಟರ್ಗಳು ಮಾರುಕಟ್ಟೆಗೆ ಬಂದಿವೆ. ಡಾ.ಅಂಬೇಡ್ಕರ್ ಅವರ ಕುರಿತಾದ ಪತ್ರಿಕಾ ಲೇಖನಗಳನ್ನು ಹಂಚಿಕೊಳ್ಳುತ್ತಿದ್ದು, ಹಿಂದೆಂದೂ ಕಾಣದಂತಹ ಅಭೂತಪೂರ್ವ ಪ್ರತಿಕ್ರಿಯೆ ಪಡೆದಿದೆ.
ಅಂಬೇಡ್ಕರ್ ಧಾರಾವಾಹಿ ಪ್ರತಿ ಮನೆ, ಮನವನ್ನೂ ಮುಟ್ಟಿದೆ. ಧಾರಾವಾಹಿಯಲ್ಲ ಬದಲಾಗಿ ಸಂಭ್ರಮಿಸುತ್ತಿರುವ ಧಾರಾವಾಹಿಯಾಗಿದೆ. ಸಮಾಜದ ಎಲ್ಲ ವಯೋಮಾನದವರು ಹಾಗೂ ವರ್ಗದವರು ಒಟ್ಟಾಗಿ ಸಂಭ್ರಮಿಸಿದ ಧಾರಾವಾಹಿ ಮತ್ತೊಂದಿಲ್ಲ ಎಂಬುದು ವಾಹಿನಿಯ ಅಭಿಪ್ರಾಯ.

ಸಾಮಾನ್ಯವಾಗಿ ಧಾರಾವಾಹಿಗಳು ಮಹಿಳೆಯರು ಹಾಗೂ ವೃದ್ಧರನ್ನು ಸೆಳೆಯುತ್ತವೆ. ಆದರೆ ವಯಸ್ಸಿನ ಮಿತಿಗಳಿಲ್ಲದೆ ಮಕ್ಕಳು, ಯುವಜನರು, ಗೃಹಿಣಿಯರು ಹಾಗೂ ನಿವೃತ್ತರಿಂದ ಆಕರ್ಷಣೆ ಪಡೆದಿರುವ ಧಾರಾವಾಹಿ ಇದಾಗಿದೆ.