ಕಿರುತೆರೆ ನಟ ಕಿರಣ್ ರಾಜ್ ಇತ್ತೀಚಿಗೆ ತಮ್ಮ ಜನ್ಮದಿನದಂದು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ ವೆಬ್ಸೈಟ್ ಒಂದನ್ನು ಆರಂಭಿಸಿದ್ದರು. ಅದರ ಜೊತೆಗೆ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಸದುದ್ದೇಶದಿಂದ ಅವರ ಮೊಬೈಲ್ ನಂಬರನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಕಿರಣ್ ತಮ್ಮ ನಂಬರನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದೇ ಅವರಿಗೆ ಸಂಕಷ್ಟ ತಂದೊಡ್ಡಿದೆ. ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ನನ್ನ ಹೆಸರಿನಲ್ಲಿ ಫೇಕ್ ಪ್ರೊಫೈಲ್ಗಳ ಸಂಖ್ಯೆ ಹೆಚ್ಚಾಗಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕಷ್ಟದಲ್ಲಿರುವವರಿಗೆ ಅನುಕೂಲವಾಗಲಿ ಎಂದು ನಾನು ಮೊಬೈಲ್ ನಂಬರ್ ಹಾಕಿದ್ದೆ. ಆದರೆ ಇದೀಗ ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಾತ್ರವಲ್ಲ ನನ್ನ ಹೆಸರಿನಲ್ಲಿ ಅನೇಕ ಫೇಕ್ ಪ್ರೊಫೈಲ್ಗಳನ್ನು ಸೃಷ್ಟಿಸಿದ್ದಾರೆ. ಅದರ ಜೊತೆಗೆ ನನ್ನ ನಂಬರನ್ನು ಕೂಡಾ ಬಳಸಿಕೊಂಡಿದ್ದಾರೆ ಎಂದು ಕಿರಣ್ ಬೇಸರ ಮಾಡಿಕೊಂಡಿದ್ದಾರೆ.
ಅಂದ ಹಾಗೆ ನನ್ನ ಹೆಸರಿನಲ್ಲಿರುವ ಪರಿಶೀಲಿಸದ ಖಾತೆಗಳನ್ನು ಯಾರೂ ಫಾಲೋ ಮಾಡಬೇಡಿ ಹಾಗೂ ಸಂಪರ್ಕಿಸಬೇಡಿ. ಇನ್ನು ನನ್ನ ಸಂಖ್ಯೆಗೆ ದಿನವೂ ಕರೆ ಬರುತ್ತಿದ್ದು ಅಶ್ಲೀಲ ಹಾಗೂ ಅಸಹ್ಯವಾದ ರೀತಿಯಲ್ಲಿ ವ್ಯವಹರಿಸುತ್ತಿದ್ದಾರೆ. ಅಷ್ಟೇ ಅಲ್ಲ, 2 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಕಿರಣ್ ಬೇಸರ ಮಾಡಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ. ಅಂತವರ ವಿರುದ್ಧ ದೂರು ನೀಡಲು ಈಗ ಕಿರಣ್ ನಿರ್ಧರಿಸಿದ್ದಾರೆ. ಈ ಹೇಯ ಕೃತ್ಯಗಳಲ್ಲಿ ಭಾಗಿಯಾಗಿರುವವರು ಈ ರೀತಿಯ ಕೆಲಸ ನಿಲ್ಲಿಸದಿದ್ದರೆ ಕಾನೂನು ಅಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.