ನಾನು ನನ್ನ ಕನಸು, ದೇವಯಾನಿ, ನಾಯಕಿ, ಕ್ಷಮಾ, ಸೇವಂತಿ ಸೇರಿ ಇನ್ನಿತರ ವಿಭಿನ್ನ ಕಥಾ ಹಂದರದ ಧಾರಾವಾಹಿಯ ಮೂಲಕ ಪ್ರೇಕ್ಷಕರನ್ನು ಸೆಳೆದ ಉದಯ ವಾಹಿನಿಯಲ್ಲಿ 'ಕಸ್ತೂರಿ ನಿವಾಸ' ಎಂಬ ಧಾರಾವಾಹಿ ಪ್ರಸಾರವಾಗುತ್ತಿದೆ.
ವರನಟ ಡಾ. ರಾಜ್ಕುಮಾರ್ ಅಭಿನಯದ 'ಕಸ್ತೂರಿ ನಿವಾಸ' ಸಿನಿಮಾ ಸೂಪರ್ ಹಿಟ್ ಆಗಿದ್ದು ಎಲ್ಲರಿಗೂ ತಿಳಿದೇ ಇದೆ. ಇದೀಗ ಅದೇ ಹೆಸರಿನ ಧಾರಾವಾಹಿಯನ್ನು ಮುಸ್ಸಂಜೆ ಮಹೇಶ್ ನಿರ್ದೇಶಿಸುತ್ತಿದ್ದು ಇದು ಯಶಸ್ವಿ 50 ದಿನಗಳನ್ನು ಪೂರೈಸಿದೆ. ಹಳೆಯ ಆಚಾರ, ಹೊಸ ವಿಚಾರ ಎಂಬ ಪರಿಕಲ್ಪನೆಯನ್ನು ಹೊಂದಿರುವ ಕಸ್ತೂರಿ ನಿವಾಸ ಸೆಪ್ಟೆಂಬರ್ 9 ರಂದು ಆರಂಭಗೊಂಡಿತ್ತು. ಪ್ರತಿದಿನ ಸಂಜೆ 6.30 ಗೆ ಪ್ರಸಾರವಾಗುವ ಈ ಧಾರಾವಾಹಿಯನ್ನು ಮಾಜಿ ಬಿಗ್ಬಾಸ್ ಸ್ಫರ್ಧಿ ಹಾಗೂ ನಟಿ ಜಯಶ್ರೀ ನಿರ್ಮಾಣ ಮಾಡುತ್ತಿದ್ದಾರೆ.
ನಾಯಕಿ ವರ್ಷ, ಮಧ್ಯಮ ಕುಟುಂಬದಿಂದ ಬಂದ ಹೆಣ್ಣು ಮಗಳು. ನಾಯಕ ದಿಲೀಪ್ ಶ್ರೀಮಂತ ಮನೆತನಕ್ಕೆ ಸೇರಿದ ಹುಡುಗ. ದಿಲೀಪ್ ತಾಯಿ ಕಸ್ತೂರಿ ಬಹಳ ಸ್ಟ್ರಿಕ್ಟ್. ಎಲ್ಲರೂ ಅವಳ ಮಾತನ್ನು ಪಾಲಿಸಬೇಕು ಎಂಬ ಹಠ ಆಕೆಯದ್ದು. ಅವರು ಹೇಳಿದ ಮೇಲೆ ಮುಗಿದೇ ಹೋಯಿತು, ಬೇರೆ ಮಾತಿಲ್ಲ, ಆಕೆಯದ್ದೇ ಅಧಿಕಾರ. ಇನ್ನು ದಿಲೀಪ್ ಮನೆಗೆ 'ಕಸ್ತೂರಿ ನಿವಾಸ' ಎಂದು ಹೆಸರಿಡಲಾಗಿದೆ. ನಾಯಕ ಮತ್ತು ನಾಯಕಿ ಪ್ರೀತಿಯಲ್ಲಿ ಬೀಳುತ್ತಾರಾ? ಇವರ ಪ್ರೀತಿಯನ್ನು ದಿಲೀಪ್ ತಾಯಿ ಒಪ್ಪುತ್ತಾರಾ ಎಂಬುದನ್ನು ಮುಂದೆ ನೋಡಬೇಕಿದೆ. ನಾಯಕ ದಿಲೀಪ್ ಶೆಟ್ಟಿ ಮತ್ತು ನಾಯಕಿ ವರ್ಷ ಈ ಧಾರಾವಾಹಿಯ ಕೇಂದ್ರ ಬಿಂದು. ಉಳಿದಂತೆ ಹಿರಿಯ ನಟಿ ಆಶಾರಾಣಿ, ಸಿತಾರಾ, ರಾಜಗೋಪಾಲ ಜೋಶಿ, ಋತು ಹಾಗೂ ಇನ್ನಿತರರು ಮುಖ್ಯ ಭೂಮಿಕೆಯಲ್ಲಿದ್ದಾರೆ.