ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಸ್ತೂರಿ ನಿವಾಸ' ಧಾರಾವಾಹಿ ಯಶಸ್ವಿ 300 ಸಂಚಿಕೆಗಳನ್ನು ಪೂರೈಸಿದೆ. ಹಳೆ ಸಂಪ್ರದಾಯ ಹಾಗೂ ಆಧುನಿಕ ವಿಚಾರಗಳ ನಡುವೆ ನಡೆಯುವ ಸಂಘರ್ಷಗಳ ಕಥೆಯನ್ನು ಹೇಳುವ ಈ ಧಾರಾವಾಹಿಯು ಜನರ ಮನಗೆದ್ದಿದೆ ಎಂಬುದಕ್ಕೆ ಯಶಸ್ವಿ 300 ಸಂಚಿಕೆ ಪೂರೈಸಿರುವುದೇ ಸಾಕ್ಷಿ.

'ಕಸ್ತೂರಿ ನಿವಾಸ' 300 ಸಂಚಿಕೆಗಳನ್ನು ಪೂರೈಸಿರುವ ಸಂಭ್ರಮದಲ್ಲಿರುವ ಧಾರಾವಾಹಿ ತಂಡ ಈಗಾಗಲೇ ಹೊಸ ಟೈಟಲ್ ಕಾರ್ಡ್ ಚಿತ್ರೀಕರಿಸಿದ್ದು ಅದರಲ್ಲಿ ಎಲ್ಲಾ ಪಾತ್ರಧಾರಿಗಳು ಇದ್ದಾರೆ. ಬೆಳಕಿನ ಹಬ್ಬ ದೀಪಾವಳಿ ಹಾಗೂ 300 ಸಂಚಿಕೆಗಳ ವಿಶೇಷ ಸಂಭ್ರಮದಲ್ಲಿ ಧಾರಾವಾಹಿ ತಂಡ ದೀಪಾವಳಿಯನ್ನು ಆಚರಿಸಲು ತಯಾರಾಗಿದೆ. ದೀಪಾವಳಿಯಂದು ಎಣ್ಣೆ ಸ್ನಾನ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ದತಿ. ಧಾರಾವಾಹಿಯಲ್ಲಿ ಕೂಡಾ ದೀಪಾವಳಿ ಆಚರಣೆಯ ಸಂಭ್ರಮವಿದ್ದು ಇದೇ ಸೋಮವಾರದಿಂದ ಶುಕ್ರವಾರದವರೆಗೆ ಈ ಸಂಚಿಕೆ ಪ್ರಸಾರವಾಗಲಿದೆ.

'ಕಸ್ತೂರಿ ನಿವಾಸ' ವಿಶೇಷ ಸಂಚಿಕೆಗಳು ಹಲವು ಕುತೂಹಲಕಾರಿ ಅಂಶಗಳಿಂದ ಕೂಡಿದೆ.ಮೃದುಲಾ ಹಾಗೂ ನಾಗವೇಣಿಯ ಸಂಬಂಧವನ್ನು ಕೆಡಿಸಲು ಸರ್ವಮಂಗಳ ಪ್ರಯತ್ನಿಸುತ್ತಾಳೆ. ಮನೆಯವರಿಗೆ ತಿಳಿಯದಂತೆ, ಮನೆಯವರ ಒಗ್ಗಟ್ಟನ್ನು ಹಾಳು ಮಾಡಲು ಪ್ರಯತ್ನಿಸುತ್ತಿರುವ, ಅದರಲ್ಲೂ ತನ್ನ ಮಗಳ ಜಾಗವನ್ನು ಆಕ್ರಮಿಸಿರುವ ಮೃದುಲಾಳನ್ನು ಹೇಗಾದರೂ ಮಾಡಿ ಮನೆಯಿಂದ ಹೊರ ಹಾಕಲೇಬೇಕು ಎಂದು ದೃಢನಿರ್ಧಾರ ಮಾಡಿರುವ ಸರ್ವಮಂಗಳ ಪ್ರಯತ್ನದ ವಿರುದ್ಧ ಮೃದುಲಾ ಹೋರಾಡುತ್ತಾಳೆ. ಒಟ್ಟಿನಲ್ಲಿ ಮನೆಯ ಶಾಂತಿ ಹಾಗೂ ಸಂತೋಷವನ್ನು ಕಾಪಾಡುವ ಸಂಚಿಕೆಗಳು ಮುಂದಿನ ದಿನಗಳಲ್ಲಿ ಪ್ರಸಾರವಾಗಲಿದೆ.