ಬೆಂಗಳೂರು : ಕನ್ನಡತಿ ಧಾರಾವಾಹಿ ವಿಭಿನ್ನ ಕಥಾ ಹಂದರದ ಮೂಲಕ ಕಿರುತೆರೆ ವೀಕ್ಷಕರ ಮನಸೆಳೆದಿರುವುದು ನಿಜ. ಈಗಾಗಲೇ ಯಶಸ್ವಿ ಮುನ್ನೂರು ಸಂಚಿಕೆಗಳನ್ನು ಪೂರೈಸಿರುವ ಕನ್ನಡತಿ ಧಾರಾವಾಹಿ ಎಲ್ಲರ ಮನೆ ಮಾತಾಗಿದೆ.
ಕನ್ನಡತಿ ಧಾರಾವಾಹಿಯಲ್ಲಿ ನಾಯಕಿ ಭುವನೇಶ್ವರಿ ಆಗಿ ಮನೆ ಮಾತಾಗಿರುವ ರಂಜನಿ ಅಭಿನಯದ ಕನ್ನಡತಿ ಧಾರಾವಾಹಿ 300 ಸಂಚಿಕೆ ಪೂರೈಸಿದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇದು ನನಗೆ ಹೊಸತೇನಲ್ಲ. ಯಾಕೆಂದರೆ, ನಾನು ನಟಿಸಿದ ಪುಟ್ಟ ಗೌರಿ ಮದುವೆ ಧಾರಾವಾಹಿ 1000 ಸಂಚಿಕೆ ಪೂರೈಸಿತ್ತು.
ಆದರೆ, ಕನ್ನಡತಿ ಧಾರಾವಾಹಿಯು ವಾಸ್ತವಕ್ಕೆ ಹತ್ತಿರವಾದ ಕಾರಣ ನನಗೆ ತುಂಬಾ ಸ್ಪೆಷಲ್. ಅಂದ ಹಾಗೇ ನಾವು ಬರೀ ಮುನ್ನೂರು ಸಂಚಿಕೆ ಪೂರೈಸಿಲ್ಲ, ಬದಲಿಗೆ ನಾವು ಮುನ್ನೂರು ಕನ್ನಡ ಶಬ್ಧಗಳನ್ನು ವೀಕ್ಷಕರಿಗೆ ಪರಿಚಯಿಸಿದ್ದೇವೆ.
ಕನ್ನಡತಿ ಧಾರಾವಾಹಿಯ ಕೊನೆಯಲ್ಲಿ ಬರುವ ಸರಿಗನ್ನಡಂ ಗೆಲ್ಗೆಯ ಮೂಲಕ ಮುನ್ನೂರು ಶಬ್ಧಗಳ ಜೊತೆಗೆ ಅರ್ಥಗಳನ್ನು ವೀಕ್ಷಕರಿಗೆ ತಿಳಿಸಿದ್ದೇವೆ ಎಂದು ಸಂತಸದಿಂದ ಹೇಳುತ್ತಾರೆ ರಂಜನಿ ರಾಘವನ್. ಇನ್ನು, ಕಳೆದ ವರ್ಷ ಕೊರೊನಾ ಕಾರಣದಿಂದ ಲಾಕ್ಡೌನ್ ಘೋಷಣೆಯಾದಾಗ ಧಾರಾವಾಹಿ ಪ್ರಸಾರ ಸ್ಥಗಿತಗೊಂಡಿತ್ತು.
ಆ ಸಮಯದಲ್ಲಿ ಶೂಟಿಂಗ್ ನಿಂತ ಕಾರಣ ರಂಜನಿ ಅವರಿಗೆ ಕೊಂಚ ಭಯವಾಗಿತ್ತಂತೆ. ತದ ನಂತರ ಮತ್ತೆ ಎಲ್ಲವೂ ಸರಿಯಾದ ಕಾರಣ ಭಯ ಕಡಿಮೆಯಾಯಿತು ಎಂದು ಹೇಳುವ ರಂಜನಿ ಟಕ್ಕರ್, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.