ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದರಿಂದ ಕನ್ನಡ ಧಾರಾವಾಹಿ ತಂಡಗಳು ಹೈದರಾಬಾದ್ಗೆ ತೆರಳಲು ತಯಾರಿ ನಡೆಸಿವೆ ಎನ್ನಲಾಗುತ್ತಿದೆ.
ಮೊದಲೇ ಶೂಟಿಂಗ್ ಮಾಡಿಕೊಂಡಿರುವ ಎಪಿಸೋಡ್ಗಳು ಈಗಾಗಲೇ ಪ್ರಸಾರಗೊಳ್ಳುತ್ತಿವೆ. ಮುಂದಿನ ಕೆಲ ದಿನಗಳಲ್ಲಿ ಧಾರಾವಾಹಿ ಸಂಚಿಕೆಗಳು ಮುಗಿಯುವ ಹಂತಕ್ಕೆ ಬಂದಿದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೇ, ರಾಜ್ಯದಲ್ಲಿ ಲಾಕ್ಡೌನ್ ಇರುವ ಹಿನ್ನೆಲೆ ಯಾವುದೇ ಶೂಟಿಂಗ್ಗಳನ್ನು ನಡೆಸುವಂತಿಲ್ಲ. ಹೀಗಾಗಿ ಧಾರಾವಾಹಿ ನಿರ್ಮಾಪಕರುಗಳಿಗೆ ಹಾಗೂ ವಾಹಿನಿಗೆ ಹೊಡೆತ ಬೀಳುವ ಸಂಭವವಿದೆ. ಇದರಿಂದ ವಾಹಿನಿಗಳ ಮುಖ್ಯಸ್ಥರು ಸಭೆ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಹೈದರಾಬಾದ್ನಲ್ಲಿ ಶೂಟಿಂಗ್ ನಡೆಸುವ ಸಂಬಂಧ ವಾಹಿನಿಗಳ ಮುಖ್ಯಸ್ಥರು ಒಮ್ಮತ ಸೂಚಿಸಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಪ್ರಮುಖವಾಗಿ ಟಿಆರ್ಪಿ ಧಾರಾವಾಹಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಹೀಗಾಗಿ ಧಾರವಾಹಿಗಳ ನಟ-ನಟಿಯರನ್ನು ಹಾಗೂ ಶೂಟಿಂಗ್ ಅಗತ್ಯವಿರುವ ಸಿಬ್ಬಂದಿಯನ್ನು ಹೈದರಾಬಾದ್ಗೆ ಕರೆದೊಯ್ಯಲು ನಿರ್ಮಾಪಕರು ಸಿದ್ಧತೆ ನಡೆಸಿದ್ದಾರೆ. ಇದಕ್ಕೂ ಮೊದಲು ಹೈದರಾಬಾದ್ಗೆ ತೆರಳುವ ಪ್ರತಿಯೊಬ್ಬರಿಗೂ ಕೋವಿಡ್ ಪರೀಕ್ಷೆ ನಡೆಸಲಿದ್ದಾರೆ.
ಹೊರಡುವ 48 ಗಂಟೆಗಳ ಮುಂಚೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ರಿಪೋರ್ಟ್ ಜೊತೆಗೆ ಹೊರಡಲಿದ್ದಾರೆ. ಅಲ್ಲಿಂದ ವಾಪಸ್ ಬರುವ 48 ಗಂಟೆಗಳ ಮುನ್ನ ಮತ್ತೆ ನೆಗೆಟಿವ್ ರಿಪೋರ್ಟ್ ಜೊತೆಗೇ ಮರಳುತ್ತಾರೆ. ನೆಗೆಟಿವ್ ರಿಪೋರ್ಟ್ ಇಲ್ಲದಿದ್ದರೆ ಎರಡೂ ರಾಜ್ಯಗಳ ಗಡಿಗಳನ್ನು ದಾಟುವುದು ಕಷ್ಟ. 15 ದಿನಗಳಿಗೆ ಶೂಟಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು ಶೂಟಿಂಗ್ ಪ್ರಕಾರ ಒಂದು ತಿಂಗಳಿಗಾಗುವಷ್ಟು ಎಪಿಸೋಡ್ಗಳನ್ನು ಚಿತ್ರೀಕರಿಸಲು ವಾಹಿನಿಗಳು ಯೋಜನೆ ಹಾಕಿಕೊಂಡಿವೆ.
ಹೈದರಾಬಾದ್ನಲ್ಲಿ ಶೂಟಿಂಗ್ ಖರ್ಚುವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ. ಆದರೂ, ಧಾರಾವಾಹಿ ಪ್ರಸಾರ ನಿಲ್ಲಿಸದಿರಲು ಒಪ್ಪಿಕೊಳ್ಳದ್ದರಿಂದ ವೆಚ್ಚವನ್ನು ನಿರ್ಮಾಪಕರೇ ಹೊರಲಿದ್ದಾರೆ. ಹೈದರಾಬಾದ್ನಲ್ಲಿ ತೆಲುಗು ಧಾರಾವಾಹಿಗಳ ಶೂಟಿಂಗ್ ನಡೆಯುವ ಸ್ಥಳಗಳನ್ನು ಹಾಗೂ ಮಾಹಿತಿಯನ್ನು ನಿರ್ಮಾಪಕರು ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಜೊತೆಗೆ ತಂತ್ರಜ್ಞರು ಹಾಗೂ ಕಲಾವಿದರಿಗೂ ಕೂಡ ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸಲು ನಿರ್ಧರಿಸಿದ್ದಾರೆ.
ಒಟ್ಟಾರೆ ಧಾರವಾಹಿಗಳ ಸಂಚಿಕೆ ಪ್ರಸಾರ ನಿಲ್ಲಿಸದಿರಲು ತೀರ್ಮಾನಿಸಿರುವ ವಾಹಿನಿ ಹಾಗೂ ನಿರ್ಮಾಪಕರು ಹರಸಾಹಸಪಟ್ಟು ವೀಕ್ಷಕರಿಗೆ ಹೊಸ ಸಂಚಿಕೆಗಳನ್ನು ಲಾಕ್ಡೌನ್ ಅವಧಿಯಲ್ಲಿ ಪ್ರಸಾರ ಮಾಡುವ ಮೂಲಕ ಮನರಂಜನೆ ನೀಡಲಿದ್ದಾರೆ.
ಹೈದ್ರಾಬಾದ್ಗೆ ತೆರಳಲಿರುವ ಧಾರವಾಹಿಗಳ ತಂಡ
- ಕಲರ್ಸ್ ಕನ್ನಡ ವಾಹಿನಿಯ ಕನ್ನಡತಿ ಗಿಣಿರಾಮ ಹಾಗೂ ಮಂಗಳ ಗೌರಿ ಧಾರಾವಾಹಿಗಳ ತಂಡ
- ಜೀ ಕನ್ನಡ ವಾಹಿನಿಯ ಜೊತೆ ಜೊತೆಯಲಿ, ಗಟ್ಟಿಮೇಳ ಹಾಗೂ ನಾಗಿಣಿ
- ಸುವರ್ಣ ವಾಹಿನಿಯ ಇಂತಿ ನಿಮ್ಮ ಆಶಾ ಹಾಗೂ ಸರಸು ಧಾರವಾಹಿ ತಂಡಗಳು ಹೈದರಾಬಾದಿಗೆ ಪ್ರಯಾಣ ಬೆಳೆಸಲಿವೆ ಎನ್ನಲಾಗಿದೆ.