ನಾಲ್ಕನೇ ಆವೃತ್ತಿಯ ಕನ್ನಡದ ಕೋಟ್ಯಧಿಪತಿ ಸೀಸನ್ ಕಿಕ್ ಆರಂಭವಾಗಿದೆ.ಮೊದಲ ಎಪಿಸೋಡ್ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮನೆಮಾಡಿತ್ತು. ಹಾಗೆಯೇ, ಎಪಿಸೋಡ್ನಲ್ಲಿ ಎಷ್ಟು ಹಣ ಗೆಲ್ಲುತ್ತಾರೆ ಎಂಬುದು ಪ್ರತಿಯೊಬ್ಬ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು.
ಫಾಸ್ಟೆಸ್ಟ್ ಫಿಂಗರ್ ರೌಂಡ್ನಲ್ಲಿ ಉತ್ತರ ಕನ್ನಡ ಕುಮಟಾ ಮೂಲದ ದೀಪಾ ಶ್ರೀನಿವಾಸ್ ಹರಿಕಾಂತ್ ವೇಗವಾಗಿ ಉತ್ತರ ನೀಡಿ ನಾಲ್ಕನೇ ಆವೃತ್ತಿಯ ಕನ್ನಡದ ಕೋಟ್ಯಧಿಪತಿಯ ಮೊದಲ ಸ್ಪರ್ಧಿಯಾಗಿ ಹಾಟ್ಸೀಟ್ ಅಲಂಕರಿಸಿದರು.
ಎರಡು ಸೇಫ್ಜೋನ್ನ ಹತ್ತು ಪ್ರಶ್ನೆಗಳಿಗೂ ಸರಿಯಾದ ಉತ್ತರ ನೀಡಿ 3.20 ಲಕ್ಷ ರೂಪಾಯಿಯನ್ನು ತಮ್ಮದಾಗಿಸಿಕೊಂಡರು. ನಂತರದಲ್ಲಿ ಸತತ ಎರಡು ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸಿದ ದೀಪಾ 12.50 ಲಕ್ಷ ಹಣ ಗಳಿಸಿದರು. ನಂತರದಲ್ಲಿ ಪ್ರಶ್ನೆಗೆ ಉತ್ತರಿಸಿದ್ದರೆ ದೀಪಾ ಕೋಟಿ ಗೆಲ್ಲುವ ಬಹುದೊಡ್ಡ ಅವಕಾಶ ಹೊಂದಿದ್ದರು. ಆದರೆ ಆ ವೇಳೆಗೆ ಎಲ್ಲ ಲೈಫ್ಲೈನ್ ಬಳಕೆ ಮಾಡಿದ್ದರು.
ಈ ಹಂತದಲ್ಲಿ ಉತ್ತರ ತಪ್ಪಾದಲ್ಲಿ 3.20 ಲಕ್ಷ, ಒಂದು ವೇಳೆ ಸರಿಯುತ್ತರ ನೀಡಿದರೆ 25 ಲಕ್ಷ ಗಳಿಸುವ ಅವಕಾಶ ಹೊಂದಿದ್ದರು. ಆದರೆ ದೀಪಾ ಹಣ ಕಳೆದುಕೊಳ್ಳಲು ಇಷ್ಟಪಡದೆ ಆಟವನ್ನು ಅಲ್ಲಿಗೆ ಮೊಟಕುಗೊಳಿಸಿದರು. ಈ ಮೂಲಕ ಕನ್ನಡದ ಕೋಟ್ಯಧಿಪತಿಯ ನಾಲ್ಕನೇ ಆವೃತ್ತಿಯ ಮೊದಲ ಸ್ಫರ್ಧಿ 12.50 ಲಕ್ಷದೊಂದಿಗೆ ಆಟ ಕೊನೆಗೊಳಿಸಿದರು.
ಪುಟ್ಟದೊಂದು ಮನೆಯ ಕಟ್ಟಿಕೊಳ್ಳುವ ಆಸೆ ಇಟ್ಟುಕೊಂಡಿರುವ ದೀಪಾ ಅವರಿಗೆ ಪುನೀತ್ ಅವರು ಚೆಕ್ ನೀಡಿ ಶುಭ ಹಾರೈಸಿದರು. ಶ್ರೀನಿವಾಸ್ ಬೋಟ್ನಲ್ಲಿ ಕೆಲಸ ಮಾಡುತ್ತಾರೆ. ಅವರು ಬರುವುದು ಮೂರು, ಅಥವಾ ಎರಡು ತಿಂಗಳಿಗೊಮ್ಮೆ. ದೀಪಾ ಅವರು ಮೀನು ಮಾರಾಟ ಕೂಡ ಮಾಡುವುದಾಗಿ ಕಾರ್ಯಕ್ರಮದಲ್ಲಿ ತಿಳಿಸಿದ್ದರು.