74 ನೇ ವರ್ಷದ ಸ್ವಾತಂತ್ಯ್ರ ದಿನಾಚರಣೆಗೆ ದಿನಗಣನೆ ಆರಂಭವಾಗಿದೆ. ಕೊರೊನಾ ಸಮಸ್ಯೆ ದೇಶವನ್ನು ಕಾಡುತ್ತಿರುವುದರಿಂದ ಈ ಬಾರಿ ಬಹಳ ಸರಳವಾಗಿ ಸ್ವಾತಂತ್ಯ್ರ ದಿನಾಚರಣೆ ಆಚರಿಸಲಾಗುತ್ತಿದೆ.
ಕನ್ನಡ ಚಿತ್ರರಂಗದ ಮೊದಲ ಮಹಿಳಾ ನಿರ್ದೇಶಕಿ ಇಂದು ವಿಶ್ವನಾಥ್ ಈ ವಿಶೇಷ ದಿನಕ್ಕಾಗಿ ದೇಶಭಕ್ತಿ ಗೀತೆಯೊಂದಕ್ಕೆ ಸಂಗೀತ ನೀಡಿ ಹೊರತರಲಿದ್ದಾರೆ. ರೋಹಿಣಿ ಟ್ರಸ್ಟ್ ವತಿಯಿಂದ 'ಓ ತಾಯಿ ಭಾರತಿ....ನಿನಗೆ ಮೊದಲ ಆರತಿ' ಎಂಬ ರಾಷ್ಟ್ರೀಯ ಭಾವೈಕ್ಯತೆ ಸಾರುವ ಗೀತೆ ಲೋಕಾರ್ಪಣೆ ಆಗಿದೆ. ಪದ್ಮಶ್ರೀ ಪ್ರೊ. ದೊಡ್ಡರಂಗೇಗೌಡ ಅವರು ರಚನೆ ಮಾಡಿರುವ ಈ ಹಾಡನ್ನು ಇಂದು ವಿಶ್ವನಾಥ್ ರಾಗ ಸಂಯೋಜನೆ ಮಾಡಲು 63 ಹಿರಿಯ ಹಾಗೂ ಕಿರಿಯ ಗಾಯಕರನ್ನು ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಕೋರೋನಾ ಭೀತಿ ನಡುವೆಯೂ ಎಲ್ಲಾ ಗಾಯಕರು ತಮ್ಮ ಧ್ವನಿ ನೀಡಿ ಸಹಕರಿಸಿದ್ದಕ್ಕಾಗಿ ಇಂದು ವಿಶ್ವನಾಥ್ ಧನ್ಯವಾದ ಅರ್ಪಿಸಿದ್ದಾರೆ. ಈಗಾಗಲೇ ಹಾಡಿನ ಪ್ರೋಮೋವೊಂದನ್ನು ಬಿಡುಗಡೆ ಮಾಡಲಾಗಿದೆ.
ಇಂದು ವಿಶ್ವನಾಥ್, ಕಟ್ಟೆ ರಾಮಚಂದ್ರ ನಿರ್ದೇಶನದಲ್ಲಿ 1993 ರಲ್ಲಿ ಬಿಡುಗಡೆ ಆದ ಡಾ. ವಿಷ್ಣುವರ್ಧನ್ ಅಭಿನಯದ 'ವೈಶಾಖದ ದಿನಗಳು' ಚಿತ್ರದ ಮೂಲಕ ಸಂಗೀತ ನಿರ್ದೇಶನ ಆರಂಭಿಸಿದವರು. ಇವರು ಇದುವರೆಗೂ ಸುಮಾರು 100 ಹಾಡುಗಳನ್ನು ಹಾಡಿದ್ದಾರೆ. ಸುಮಾರು 50 ಕ್ಕೂ ಹೆಚ್ಚು ಆಡಿಯೋ ಆಲ್ಪಮ್ಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಜಿಂಗಲ್ಸ್, ಟಿವಿ ಧಾರಾವಾಹಿ, ಸಾಕ್ಷ್ಯ ಚಿತ್ರ, ಕಿರುಚಿತ್ರಗಳಿಗೂ ಇಂದು ವಿಶ್ವನಾಥ್ ಸಂಗೀತ ಒದಗಿಸಿದ್ದಾರೆ. ಉದಯ ವಾಹಿನಿಯಲ್ಲಿ ಇಂದು ವಿಶ್ವನಾಥ್ ಅವರ 'ಗೀತಾಂಜಲಿ' ಸರಣಿ ಬಹಳ ಫೇಮಸ್ ಆಗಿತ್ತು. ದೂರದರ್ಶನದಲ್ಲಿ 'ಶೃಂಗಾರ ತರಂಗ' ಎಂಬ ಕಾರ್ಯಕ್ರಮವನ್ನು ಕೂಡಾ ಇಂದು ವಿಶ್ವನಾಥ್ ನಿರ್ದೇಶನ ಮಾಡಿದ್ದಾರೆ. ಹಲವಾರು ಪ್ರಶಸ್ತಿಗಳ ಜೊತೆಗೆ ನೂರಾರು ವೇದಿಕೆಯಲ್ಲಿ ಇವರು ಕಾರ್ಯಕ್ರಮಗಳನ್ನು ನೀಡಿ ಸಂಗೀತಪ್ರಿಯರ ಮನ ಗೆದ್ದಿದ್ದಾರೆ.