ಚಂದನವನದ ಹಿರಿಯ ನಟಿ ವಿನಯಾ ಪ್ರಸಾದ್ ಅವರ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ...? ತಮ್ಮ ಮನೋಜ್ಞ ಅಭಿನಯದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ವಿನಯಾ ಪ್ರಸಾದ್ ಅವರು ಈಗ 'ಪಾರು' ಧಾರಾವಾಹಿಯ ಅಖಿಲಾಂಡೇಶ್ವರಿಯಾಗಿ ಕಿರುತೆರೆ ಪ್ರಿಯರಿಗೆ ನಟನೆಯ ರಸದೌತಣವನ್ನು ಉಣಬಡಿಸುತ್ತಿದ್ದಾರೆ.
ಚಂದನವನದ ಈ ಅದ್ಭುತ ನಟಿಯ ಪುತ್ರಿ ಪ್ರಥಮಾ ಪ್ರಸಾದ್ ಕೂಡಾ ಕಿರುತೆರೆ ಕಲಾವಿದೆ. 'ಅಮ್ನೋರು' ಧಾರಾವಾಹಿಯಲ್ಲಿ ದೇವಿ ಪಾತ್ರದಲ್ಲಿ ಮಿಂಚುತ್ತಿರುವ ಪ್ರಥಮಾ ಪ್ರಸಾದ್ 'ಬೊಂಬೆಯಾಟವಯ್ಯಾ' ಧಾರಾವಾಹಿಯ ಮೂಲಕ ಕಿರುತೆರೆ ಯಾನ ಶುರು ಮಾಡಿದರು. ದೇವಿ, ಮಹಾದೇವಿ ಧಾರಾವಾಹಿಗಳಲ್ಲಿ ದೇವಿಯ ಪಾತ್ರಕ್ಕೆ ಜೀವ ತುಂಬಿರುವ ಪ್ರಥಮಾ ಪ್ರಸಾದ್ಗೆ ಕಿರುತೆರೆಯಲ್ಲಿ ಹೆಸರು ತಂದು ಕೊಟ್ಟಿದ್ದು ಪುಟ್ಟತ್ತೆ ಪಾತ್ರ. 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಾಯಕ ಲಕ್ಕಿಯ ಪುಟ್ಟತ್ತೆಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಪ್ರಥಮಾ ಪ್ರಸಾದ್ ಅದ್ಭುತ ನೃತ್ಯಗಾರ್ತಿ ಎನ್ನುವುದು ಕೂಡಾ ಹಲವರಿಗೆ ತಿಳಿದಿಲ್ಲ.
ಕಥಕ್ ಕಲಾವಿದೆಯಾಗಿರುವ ಪ್ರಥಮಾ ಪ್ರಸಾದ್, ಮಾಯಾರಾವ್ ಅವರ ಕಥಕ್ ಗರಡಿಯಲ್ಲಿ ಪಳಗಿದಾಕೆ. ಕರ್ನಾಟಕ ಬೋರ್ಡ್ ಸೆಕೆಂಡರಿ ಪರೀಕ್ಷೆಯಲ್ಲಿ ಪ್ರಥಮಾ ವಿದ್ವತ್ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ನಟನೆಯ ಜೊತೆ ಜೊತೆಗೆ ಅವರು ನೃತ್ಯವನ್ನು ಕೂಡಾ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ. 'ಚೌಕಾಬಾರ' ಸಿನಿಮಾದಲ್ಲಿ ಕೂಡಾ ಬಣ್ಣ ಹಚ್ಚಿರುವ ಪ್ರಥಮಾ ಪ್ರಸಾದ್ಗೆ ಈಗಾಗಲೇ ಮದುವೆಯಾಗಿದ್ದು ಸ್ಪಟಿಕಾ ರಾವ್ ಎಂಬ ಮಗಳು ಇದ್ದಾರೆ. ಪ್ರಥಮಾ ಪ್ರಸಾದ್ ಅವರ ಪತಿ ಕೂಡಾ ಶಾಸ್ತ್ರೀಯ ನೃತ್ಯ ಕಲಾವಿದ. ಅವರ ಹೆಸರು ಸೂರ್ಯ ರಾವ್.
ಸೂರ್ಯ ಅವರು ಕೂಡಾ ಮಾಯಾರಾವ್ ಅವರ ಬಳಿ ನೃತ್ಯವನ್ನು ಕಲಿತಿದ್ದಾರೆ. ತಮ್ಮ ಸೀನಿಯರ್ ಆಗಿದ್ದ ಸೂರ್ಯರಾವ್ ಅವರನ್ನು ಬಾಳ ಸಂಗಾತಿಯನ್ನಾಗಿ ಆರಿಸಿಕೊಂಡ ಪ್ರಥಮಾ ಪ್ರಸಾದ್ ಅವರು ಪತಿಯೊಡನೆ ಸೇರಿ ಸುಮಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಪ್ರಥಮಾ ಅವರು ನೃತ್ಯದ ಜೊತೆಗೆ ನಟನೆಯಲ್ಲೂ ಬ್ಯುಸಿಯಾಗಿದ್ದಾರೆ. ಪತಿ ಸೂರ್ಯರಾವ್ ಅವರು ಮಹಾಮಾಯಾ ಆರ್ಟಿಸ್ಟ್ ಫೌಂಡೇಶನ್ ನಿರ್ದೇಶಕರಾಗಿದ್ದಾರೆ. ಈ ದಂಪತಿ ಕಲೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವುಂದತೂ ನಿಜ.