ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ಸರ್ಕಾರಿ ವಕೀಲನ ಪಾತ್ರಕ್ಕೆ ಮಾಜಿ ಬಿಗ್ಬಾಸ್ ಸ್ಪರ್ಧಿ, ನಿರೂಪಕ ರೆಹಮಾನ್ ಹಸೀಬ್ ಜೀವ ತುಂಬಲು ಬಂದಿದ್ದಾರೆ. ಬಿಎಸ್ಸಿ ಎಲೆಕ್ಟ್ರಾನಿಕ್ಸ್ ಓದಿರುವ ರೆಹಮಾನ್ಗೆ ಎಂಬಿಎ ಓದುವ ಬಯಕೆ ಇತ್ತು. ಆದರೆ ಆಕಸ್ಮಿಕವಾಗಿ ವಾರ್ತಾ ವಾಚಕ ಹುದ್ದೆ ಅವರನ್ನು ಹುಡುಕಿ ಬಂತು. ಮುಂದೆ ಬಿಗ್ಬಾಸ್-3 ರ ಸ್ಪರ್ಧಿಯಾಗಿ ಭಾಗವಹಿಸುವ ಅವಕಾಶ ದೊರೆತಾಗ ಕೆಲಸಕ್ಕೆ ಗುಡ್ಬೈ ಹೇಳಿದರು. ಬಿಗ್ಬಾಸ್ ಮನೆಗೆ ಹೋಗುವ ಮುನ್ನ ಮೂರೇ ವಾರಗಳಲ್ಲಿ ನಾನು ವಾಪಸ್ ಬರುತ್ತೇನೆ ಅಂದುಕೊಂಡಿದ್ದ ರೆಹಮಾನ್ ಕೊನೆವರೆಗೂ ಉಳಿದಿದ್ದರು. ವಿಶೇಷ ಎಂದರೆ ಅಲ್ಲಿ ಅವರು ವೀಕ್ಷಕರಿಗೆ ಮತ್ತಷ್ಟು ಹತ್ತಿರವಾದರು.
ಮುಂದೆ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ರೆಹಮಾನ್, ನಿಖಿಲ್ ಕುಮಾರಸ್ವಾಮಿ ಅಭಿನಯದ 'ಜಾಗ್ವಾರ್' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಗಮನ ಸೆಳೆದರು. ಅದಾದ ಮೇಲೆ 'ಗರ' ಸಿನಿಮಾದಲ್ಲೂ ನಟಿಸಿದರು. ನಂತರ ಕಿರುತೆರೆಯತ್ತ ಮುಖ ಮಾಡಿರುವ ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕೃಷ್ಣ ತುಳಸಿ' ಧಾರಾವಾಹಿಯಲ್ಲಿ ನಾಯಕಿಯ ಅಣ್ಣನಾಗಿ ನಟಿಸಿದರು. ರಿಯಾಲಿಟಿ ಶೋ ಒಂದರ ನಿರೂಪಕನಾಗಿ ಕೂಡಾ ಮಿಂಚಿದ್ದ ರೆಹಮಾನ್ ಇದೀಗ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.