ಹುಬ್ಬಳ್ಳಿ: ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಹ್ಯಾಟ್ರಿಕ್ ನಿರ್ದೇಶಕ ಜೋಗಿ ಪ್ರೇಮ್. ಅವರ ನಿರ್ದೇಶನದ ಮತ್ತೊಂದು ಸಿನಿಮಾ 'ಏಕ್ ಲವ್ ಯಾ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲಿ ನೆರವೇರಿಸಲಾಯಿತು.
ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ನಿರ್ಮಾಣ ಮಾಡಿರುವ 'ಏಕ್ ಲವ್ ಯಾ' ಚಿತ್ರದ ಮೂರು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, 4ನೇ ಹಾಡನ್ನು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಯಿತು. ಚಿತ್ರದಲ್ಲಿ ಹೊಸ ನಾಯಕ ನಟ ರಾಣಾ, ನಾಯಕಿ ರೀಷ್ಮಾ ನಾಣಯ್ಯ ಹಾಗು ರಚಿತಾ ರಾಮ್ ಸೇರಿದಂತೆ ಸಾಕಷ್ಟು ನಟರ ತಾರಾಬಳಗವೇ ಅಭಿನಯಿಸಿದೆ.
ಆಡಿಯೋ ಲಾಂಚಿಂಗ್ ವೇಳೆ ಕಲಾವಿದನ ಆನಂದಭಾಷ್ಪ:
ಏಕ್ ಲವ್ ಯಾ ಆಡಿಯೋ ಲಾಂಚಿಂಗ್ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಭಾಗದ ಗಜೇಂದ್ರಗಡದ ಕಲಾವಿದ ಶರಣ ಕುಮಾರ್ ಕಣ್ಣೀರು ಹಾಕಿದ್ದಾರೆ. ಏಕ್ ಲವ್ ಯಾ ಸಿನಿಮಾದಲ್ಲಿ ಕಲಾವಿದ ಶರಣ ಕುಮಾರ್ ಅವರು ಗೀತೆ ಬರೆದಿದ್ದಾರೆ. ನಿನ್ನೆ(ಶನಿವಾರ) ಬಿಡುಗಡೆಯಾದ ಹಾಡು ಶರಣ ಕುಮಾರ್ ಬರೆದಿದ್ದು, ಹೀಗಾಗಿ ಚಿತ್ರ ನಿರ್ದೇಶಕ ಜೋಗಿ ಪ್ರೇಮ್ ನೀಡಿದ ಅವಕಾಶ ನೆನೆದು ಶರಣ ಕುಮಾರ್ ಪ್ರೇಮ್ ಅವರ ಮುಂದೆ ಆನಂದ ಭಾಷ್ಪ ಸುರಿಸಿದ್ದಾರೆ.

ಅಪ್ಪು ನೆನೆದ ಪ್ರೇಮ್:
ಕಾರ್ಯಕ್ರಮದಲ್ಲಿ ನಿರ್ದೇಶಕ ಜೋಗಿ ಪ್ರೇಮ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ನೆನೆದು ಭಾವುಕರಾದರು. ಚಿತ್ರದ ಮೊದಲ ಹಾಡು ಬಿಡುಗಡೆಯಾದಾಗ ಅಪ್ಪು ಫೋನ್ ಮಾಡಿ ನನಗೆ ಬೇಷ್ ಅಂದಿದ್ದರು. ಅವರನ್ನ ತುಂಬಾ ಮಿಸ್ ಮಾಡ್ಕೊತ್ತಿದ್ದೀನಿ. ಅವರ ನಂಬರ್ ಇನ್ನೂ ನನ್ನ ಫೋನ್ನಲ್ಲಿ ಸೇವ್ ಇದೆ. ಅದನ್ನ ಎಂದಿಗೂ ತೆಗೆಯೊದಿಲ್ಲ. ನಾನು ಇರುವವರೆಗೂ ಅವರ ನಂಬರ್ ನನ್ನ ಫೋನ್ನಲ್ಲಿಯೇ ಇರುತ್ತದೆ ಎಂದರು.
ಇದನ್ನೂ ಓದಿ: 'ಏಕ್ ಲವ್ ಯಾ' ಬಗ್ಗೆ ಮಹತ್ವದ ಮಾಹಿತಿ ನೀಡಿದ್ರು ಪ್ರೇಮ್