1995 ರಲ್ಲಿ ಇಡೀ ಭಾರತೀಯ ಸಿನಿಮಾರಂಗ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ಎವರ್ ಗ್ರೀನ್ ಸಿನಿಮಾ 'ಓಂ'. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್ ಸೂಪರ್ ಹಿಟ್ 'ಓಂ' ಚಿತ್ರಕ್ಕೆ ಇಂದು 25 ರ ಸಂಭ್ರಮ.
![OM movie celebrating 25th year](https://etvbharatimages.akamaized.net/etvbharat/prod-images/kn-bng-01-shivanna-om-cinema-bhagge-dailaguwriter-marali-hedida-kathie-72014735_19052020150316_1905f_1589880796_652.jpg)
ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಹಾಗೂ ಉಪೇಂದ್ರ ಆತ್ಮೀಯ ಗೆಳೆಯ ಮುರಳಿ ಮೋಹನ್ ಚಿತ್ರದ ಬಗ್ಗೆ ಯಾರಿಗೂ ಗೊತ್ತಿಲ್ಲದ ಹಲವು ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಚಿತ್ರಮಂದಿರಗಳಲ್ಲಿ ರಿಲೀಸ್ ಆದ್ರೆ ಇವತ್ತಿಗೂ 25-50 ಲಕ್ಷ ಕಲೆಕ್ಷನ್ ಮಾಡುವ 'ಓಂ' ಸಿನಿಮಾಗೆ ಮೊದಲು 'ಸತ್ಯ ಮತ್ತು ಗೋವಿಂದ' ಎಂದು ಹೆಸರಿಟ್ಟಿದ್ದಂತೆ. ಉಪೇಂದ್ರ ಅಣ್ಣ ಸುಧೀಂದ್ರ ಅವರ ಸ್ನೇಹಿತರೊಬ್ಬರ ಬದುಕಿನಲ್ಲಿ ನಡೆದ ನಿಜ ಜೀವನದ ಘಟನೆಯೇ ಈ ಚಿತ್ರದ ಕಥೆ ಬರೆಯಲು ಸ್ಫೂರ್ತಿಯಂತೆ.
![OM movie celebrating 25th year](https://etvbharatimages.akamaized.net/etvbharat/prod-images/kn-bng-01-shivanna-om-cinema-bhagge-dailaguwriter-marali-hedida-kathie-72014735_19052020150316_1905f_1589880796_31.jpg)
ಈ ಚಿತ್ರಕ್ಕೆ ಅಂದಿನ ಇಬ್ಬರು ನಾಯಕರಾದ ಕುಮಾರ್ ಗೋವಿಂದ್ ಅಥವಾ ರಘುವೀರ್ ನಾಯಕರಾಗಬೇಕಿತ್ತಂತೆ. ಆದರೆ 'ಶ್' ಚಿತ್ರದ ನಂತರ ಉಪೇಂದ್ರ ಹಾಗೂ ಕುಮಾರ್ ಗೋವಿಂದ್ ಇಬ್ಬರ ನಡುವೆ ಸ್ವಲ್ಪ ಭಿನ್ನಾಬಿಪ್ರಾಯ ಉಂಟಾಗಿದ್ದರಿಂದ 'ಓಂ' ಸಿನಿಮಾ ನಿಂತುಹೋಯ್ತು. ಆದರೆ ಮತ್ತೆ ಈ ಸಿನಿಮಾ ಆರಂಭವಾಗಿದ್ದು ಹೊನ್ನವಳ್ಳಿ ಕೃಷ್ಣ ಅವರಿಂದ. ಹೊನ್ನವಳ್ಳಿ ಕೃಷ್ಣ ಅವರ ಸಹಾಯದಿಂದ ಉಪೇಂದ್ರ ಹಾಗೂ ಮುರಳಿ ಮೋಹನ್ ಡಾ. ರಾಜ್ಕುಮಾರ್, ಪಾರ್ವತಮ್ಮ ರಾಜ್ಕುಮಾರ್ ಹಾಗೂ ರಾಜ್ ಅವರ ಸಹೋದರ ವರದರಾಜ್ ಅವರನ್ನು ಭೇಟಿ ಮಾಡಲು ಸಾಧ್ಯವಾಯ್ತಂತೆ. ಎಲ್ಲರೂ ಕಥೆ ಕೇಳಿ ಒಂದಷ್ಟು ಬದಲಾವಣೆಗಳೊಂದಿಗೆ ಓಕೆ ಆದಾಗ ಚಿತ್ರ ಸೆಟ್ಟೇರಿದೆ.
![OM movie celebrating 25th year](https://etvbharatimages.akamaized.net/etvbharat/prod-images/kn-bng-01-shivanna-om-cinema-bhagge-dailaguwriter-marali-hedida-kathie-72014735_19052020150316_1905f_1589880796_167.jpg)
ನಂತರ ಈ ಚಿತ್ರಕ್ಕೆ ಡಾ. ರಾಜ್ಕುಮಾರ್ 'ಓಂ' ಎಂದು ಟೈಟಲ್ ಇಟ್ಟರು. 'ಓಂ' ಚಿತ್ರದ ಕಥೆ ಮುಗಿದ ನಂತರ ಈ ಚಿತ್ರ ಆರಂಭವಾಗಲು ಬರೋಬ್ಬರಿ 8 ತಿಂಗಳು ಬೇಕಾಯ್ತಂತೆ. ಇನ್ನು ಈ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗೋದಿಕ್ಕೆ ಮುಖ್ಯ ಕಾರಣ ಸಂಗೀತ ನಿರ್ದೇಶಕ ಹಂಸಲೇಖ. ಅಚ್ಚರಿ ಅಂದ್ರೆ 'ಓಂ' ಸಿನಿಮಾದ ಮೊದಲ ಹಾಡು ಕಂಪೋಸ್ ಆಗಿದ್ದು, ಡಾ. ರಾಜ್ಕುಮಾರ್ ಅವರ ಸದಾಶಿವನಗರದ ಮನೆಯಲ್ಲಂತೆ.
![OM movie celebrating 25th year](https://etvbharatimages.akamaized.net/etvbharat/prod-images/kn-bng-01-shivanna-om-cinema-bhagge-dailaguwriter-marali-hedida-kathie-72014735_19052020150316_1905f_1589880796_568.jpg)
ಇನ್ನು ಸಿನಿಮಾದಲ್ಲಿ ರಿಯಲ್ ರೌಡಿಗಳನ್ನು ಕರೆತಂದು ಆ್ಯಕ್ಟ್ ಮಾಡಿಸಿದ್ದು ಚಿತ್ರದ ದೊಡ್ಡ ಸವಾಲಾಗಿತ್ತಂತೆ. ಜೇಡರಹಳ್ಳಿ ಕೃಷ್ಣ, ಕೋಳಿ ಫಯಾಜ್, ಕೊರಂಗು, ಬೆಕ್ಕಿನ ಕಣ್ಣು ರಾಜೇಂದ್ರ, ತನ್ವೀರ್ ಹೀಗೆ ರಿಯಲ್ ರೌಡಿಗಳು ಓಂ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇವರೆಲ್ಲರೂ ಅಭಿನಯಿಸಲು ಕಾರಣವಾಗಿದ್ದು ಡಾ. ರಾಜ್ಕುಮಾರ್ ಬ್ಯಾನರ್ ಎಂಬ ಗೌರವದಿಂದ.
![OM movie celebrating 25th year](https://etvbharatimages.akamaized.net/etvbharat/prod-images/kn-bng-01-shivanna-om-cinema-bhagge-dailaguwriter-marali-hedida-kathie-72014735_19052020150316_1905f_1589880796_182.jpg)
ಈ ಚಿತ್ರ ಬ್ಲಾಕ್ ಬಸ್ಟರ್ ಆಗುತ್ತೆ ಅಂತ ಡಾ. ರಾಜ್ಕುಮಾರ್ ಅವರ ಸಹೋದರ ವರದರಾಜ್ ಅಂದೇ ಭವಿಷ್ಯ ಹೇಳಿದ್ದರಂತೆ. 'ಓಂ' ಸಿನಿಮಾ ಅಂದಿನ ದಿನಗಳಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿತ್ತು. ಆದರೆ ಈ ಚಿತ್ರ ರಿಲೀಸ್ ಆದ ಕೆಲವೇ ದಿನಗಳಲ್ಲಿ 55 ಲಕ್ಷ ರೂಪಾಯಿಗೆ ರೀಮೆಕ್ ಹಕ್ಕು ಮಾರಾಟವಾಗಿತ್ತು. ರಾಜ್ಯದಲ್ಲಿ 650ಕ್ಕೂ ಹೆಚ್ಚು ಬಾರಿ ರೀ ರಿಲೀಸ್ ಆದ ಮೊಟ್ಟ ಮೊದಲ ಸಿನಿಮಾ ಇದಾಗಿದೆ.
![OM movie celebrating 25th year](https://etvbharatimages.akamaized.net/etvbharat/prod-images/kn-bng-01-shivanna-om-cinema-bhagge-dailaguwriter-marali-hedida-kathie-72014735_19052020150316_1905f_1589880796_674.jpg)
25 ನೇ ವರ್ಷದ ಸಂಭ್ರಮದಲ್ಲಿರುವ ಓಂ ಸಿನಿಮಾಗೆ ಪ್ರೇಮಾ ಆಯ್ಕೆ ಆಗಿದ್ದು ಕೂಡಾ ದೊಡ್ಡ ಸವಾಲಾಗಿತ್ತು. ಮೊದಲು ನಾಯಕಿ ಅಂತಾ ಸೆಲೆಕ್ಟ್ ಆಗಿದ್ದು ಸೌಂದರ್ಯ. ಒಂದು ವೇಳೆ ಇವರ ಡೇಟ್ಸ್ ದೊರೆಯದಿದ್ದಲ್ಲಿ ನಂದಿನಿ ಸಿಂಗ್, ಸುಧಾರಾಣಿ ಅಥವಾ ಮೋಹಿನಿ ಇಲ್ಲವೇ ಹಿಂದಿಯ ಜೂಹಿ ಚಾವ್ಲಾ ಎನ್ನಲಾಗಿತ್ತು. ಆದರೆ ಕೊನೆಗೆ ಆಯ್ಕೆಯಾಗಿದ್ದು ಪ್ರೇಮಾ. ಕೊಡಗಿನ ಸುಂದರಿ ಪ್ರೇಮಾ ಸಣ್ಣ ಇದ್ದ ಕಾರಣಕ್ಕೆ ಸಂಭಾಷಣೆಕಾರ ಮುರಳಿ ಮೋಹನ್ ಅವರ ಕಾಸ್ಟೂಮ್ಗಳಿಗೆ ಹೆಚ್ಚು ಒತ್ತು ಕೊಟ್ಟಿದ್ರಂತೆ.
![OM movie celebrating 25th year](https://etvbharatimages.akamaized.net/etvbharat/prod-images/kn-bng-01-shivanna-om-cinema-bhagge-dailaguwriter-marali-hedida-kathie-72014735_19052020150316_1905f_1589880796_293.jpg)
ಹೀಗೆ ಹಲವು ರೋಚಕತೆಯಿಂದ ಕೂಡಿರುವ 'ಓಂ' ಸಿನಿಮಾ 25 ನೇ ವರ್ಷದ ಜನ್ಮದಿನ ಆಚರಿಸುತ್ತಿದೆ. ಈ ಖುಷಿಯನ್ನು ಅಭಿಮಾನಿಗಳು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮಿಸುತ್ತಿದ್ದಾರೆ. ಹಾಗೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೂ ಇಂದು ಡಬ್ಬಲ್ ಸಂಭ್ರಮ. ಒಂದು ಚಿತ್ರದ ಸಿಲ್ವರ್ ಜ್ಯೂಬ್ಲಿ ಆದರೆ ಶಿವಣ್ಣ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನವಾಗಿದ್ದು ಅಭಿಮಾನಿಗಳಿಗೂ ಇದು ಸಂತೋಷ ತಂದಿದೆ.