ಮುಂಬೈ: ಕಿರುತೆರೆ ನಟಿ ಹಾಗೂ 'ಗೋಪಿ ಬಹು' ಪಾತ್ರದಿಂದ ಖ್ಯಾತಿ ಪಡೆದಿರುವ ದೇವೊಲಿನಾ ಚಟರ್ಜಿಗೆ ಮಹಿಳೆಯೊಬ್ಬಳು ಜೀವ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ. ಬಿಗ್ಬಾಸ್ ಖ್ಯಾತಿಯ ಸಿದ್ಧಾರ್ಥ ಶುಕ್ಲಾ ಹಾಗೂ ರಶ್ಮಿ ದೇಸಾಯಿ ಅವರಿಗೂ ಈ ಮಹಿಳೆ ಬೆದರಿಕೆ ಹಾಕಿದ್ದಾಳೆ.
ಟ್ವಿಟರ್ನಲ್ಲಿ ಬೆದರಿಕೆ ಹಾಕಿದ್ದನ್ನು ಸ್ಕ್ರೀನ್ಶಾಟ್ ಹಂಚಿಕೊಂಡಿರುವ ದೇವೊಲಿನಾ, ತನಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಬೆದರಿಕೆ ಒಡ್ಡಿದ ಮಹಿಳೆ ಅರ್ಹಾನ್ ಖಾನ್ ಅಭಿಮಾನಿ ಇರಬಹುದೆಂದು ಶಂಕಿಸಲಾಗಿದ್ದು, ರಶ್ಮಿ ಹಾಗೂ ಅರ್ಹಾನ್ ಮಧ್ಯದ ಸಂಬಂಧವೇ ಇದಕ್ಕೆಲ್ಲ ಕಾರಣವಿರಬಹುದು ಎನ್ನಲಾಗಿದೆ.
ಮಹಿಳೆಯ ಬೆದರಿಕೆ ಟ್ವೀಟ್ ಹೀಗಿದೆ: "ನೀವು ಪದೇ ಪದೇ ಅರ್ಹಾನ್ರನ್ನು ಕೀಳಾಗಿ ಬಿಂಬಿಸುತ್ತಿರುವಿರಿ. ನೀವು ಯಾರಿಗಾಗಿ ಇದನ್ನೆಲ್ಲ ಮಾಡುತ್ತಿರುವಿರೋ ಅವರು ಹಾಗೂ ನಿಮ್ಮಿಬ್ಬರ ಹೆಣ ಸಹ ಯಾರಿಗೂ ಸಿಗಲ್ಲ. ನಾನು ರಶ್ಮಿ ಹಾಗೂ ಸಿದ್ಧಾರ್ಥ ಶುಕ್ಲಾ ಬಗ್ಗೆ ಹೇಳುತ್ತಿರುವೆ. ಇನ್ನು ಮುಂದೆ ನಿಮ್ಮ ಬಾಯಿ ಮುಚ್ಚಿಕೊಂಡಿದ್ದರೆ ಸರಿ. ಇನ್ನೊಂದು ಬಾರಿ ಅರ್ಹಾನ್ ವಿರುದ್ಧ ಮಾತನಾಡಿದರೆ ಅದೇ ನಿಮ್ಮ ಕೊನೆಯ ದಿನವಾಗುವುದು."
ಈ ಟ್ವೀಟ್ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿ ಮುಂಬೈ ಪೊಲೀಸರ ಗಮನಕ್ಕೆ ಬಂದಿದ್ದು, ಸೈಬರ್ ಸೆಲ್ ಪೊಲೀಸರು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ದೇವೊಲಿನಾ, ರಶ್ಮಿ, ಸಿದ್ಧಾರ್ಥ ಹಾಗೂ ಅರ್ಹಾನ್ ನಾಲ್ವರೂ ಬಿಗ್ಬಾಸ್ 13 ರ ಕಂಟೆಸ್ಟಂಟ್ ಆಗಿದ್ದರು. ಅದರಲ್ಲಿ ರಶ್ಮಿ ಹಾಗೂ ಅರ್ಹಾನ್ ಮಧ್ಯದ ಸಂಬಂಧ ಮುರಿದು ಬಿದ್ದಿತ್ತು. ಅರ್ಹಾನ್ನ ಹಿಂದಿನ ಪತ್ನಿ ಹಾಗೂ ಮಗುವಿನ ಬಗ್ಗೆ ರಶ್ಮಿಗೆ ತಿಳಿದು ಬಂದಿದ್ದರಿಂದ ದೊಡ್ಡ ರಂಪಾಟ ನಡೆದಿತ್ತು. ಇವರಿಬ್ಬರ ಅಭಿಮಾನಿಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಜಗಳವಾಡುವುದು ಸಾಮಾನ್ಯವಾಗಿ ಬಿಟ್ಟಿದೆ.