ಕನ್ನಡದಲ್ಲಿ ಈಗಾಗಲೇ ಅನೇಕ ಮನರಂಜನಾ ವಾಹಿನಿಗಳು, ಸುದ್ದಿ ವಾಹಿನಿಗಳು ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಇದೀಗ ಕಿರುತೆರೆ ಲೋಕಕ್ಕೆ 'ದಂಗಲ್ ಕನ್ನಡ' ಎಂಬ ಹೊಸ ವಾಹಿನಿಯೊಂದು ಸೇರ್ಪಡೆಯಾಗಿದೆ. ಇಂದಿನಿಂದ ವೀಕ್ಷಕರು ಈ ವಾಹಿನಿಯಲ್ಲಿ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ.
'ಇದ್ರಲ್ಲಿದೆ ಏನೋ ವಿಶೇಷ' ಎಂಬ ಅಡಿಬರಹಕ್ಕೆ ಹೊಂದುವಂತೆ ಈ ವಾಹಿನಿಯಲ್ಲಿ ವಿಭಿನ್ನ ಕಾರ್ಯಕ್ರಮಗಳು ಪ್ರಸಾರವಾಗಲಿವೆ ಎನ್ನಲಾಗುತ್ತಿದೆ. 2006ರಲ್ಲಿ ಆರಂಭಗೊಂಡು, ಕಿರುತೆರೆಯಲ್ಲಿ ತನ್ನದೇ ಛಾಪು ಮೂಡಿಸಿ ಹಿಂದಿ, ಮರಾಠಿ, ಬಂಗಾಲಿ, ಭೋಜ್ಪುರಿ ಭಾಷೆಗಳಲ್ಲಿ ಮನೆ ಮಾತಾಗಿರುವ ಎಂಟರ್ಟೈನ್ ಗ್ರೂಪ್ ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಮೊದಲ ಬಾರಿಗೆ ದಂಗಲ್ ಕನ್ನಡ ಮೂಲಕ ಪ್ರಸಾರ ಆರಂಭಿಸುತ್ತಿದೆ.
ರಾಮಾಯಣ , ಸಾಯಿಬಾಬಾ, ಶನಿ ನಿನ್ನ ಮಹಿಮೆಯಂತಹ ಪೌರಾಣಿಕ ಧಾರಾವಾಹಿಗಳೊಂದಿಗೆ ನಾಗವಲ್ಲಿಯಂತಹ ಫ್ಯಾಂಟಸಿ ಧಾರಾವಾಹಿ, ಸಮಾಜದಲ್ಲಿ ನಡೆಯುವ ಅಪರಾಧಗಳ ಮೇಲೆ ಬೆಳಕು ಚೆಲ್ಲವ ಕ್ರೈಂ ಅಲರ್ಟ್, ಕುಬ್ಜ ಹೆಣ್ಣೊಬ್ಬಳ ಕುರಿತಾದ ಬೆಳದಿಂಗಳ ಬಾಲೆ ಹಾಗೂ ಭರಪೂರ ಮನರಂಜನೆ ಕೊಡುವ ತೆನಾಲಿ ರಾಮ ಮುಂತಾದ ಧಾರಾವಾಹಿಗಳು ವಾರದ ಏಳು ದಿನಗಳ ಕಾಲ ಪ್ರಸಾರವಾಗಲಿವೆ. ಇದಲ್ಲದೆ ಸಿನಿಮಾಗಳು ಕೂಡಾ ಈ ವಾಹಿನಿಯಲ್ಲಿ ಪ್ರಸಾರವಾಗಲಿದೆ. ನಟಿ ಹರಿಪ್ರಿಯ ಈ ವಾಹಿನಿಯ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದು ವೀಕ್ಷಕರು ಹೊಸ ವಾಹಿನಿ ಆರಂಭವಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.