ಸ್ಯಾಂಡಲ್ವುಡ್ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅಗಲಿ ಒಂದು ತಿಂಗಳು ಕಳೆದಿದೆ. ಚಿರು ಕುಟುಂಬದವರು ನಿಧಾನವಾಗಿ ಆ ನೋವಿನಿಂದ ಹೊರ ಬರುತ್ತಿದ್ದಾರೆ. ಆದರೂ ಅವರ ನೆನಪುಗಳು ಅಭಿಮಾನಿಗಳು, ಸ್ನೇಹಿತರು ಹಾಗೂ ಕುಟುಂಬದವರನ್ನು ಎಂದಿಗೂ ಕಾಡುತ್ತಿರುತ್ತದೆ.
ಈ ನಡುವೆ ಚಿರು ಅಭಿಮಾನಿಗಳಿಗೆ ಅವರ ಸಿನಿಮಾವನ್ನು ಕಿರುತೆರೆಯಲ್ಲಿ ನೋಡುವ ಅವಕಾಶ ದೊರೆತಿದೆ. ಜುಲೈ 18, ಶನಿವಾರ ಸಂಜೆ 6.30ಕ್ಕೆ ಉದಯ ವಾಹಿನಿಯಲ್ಲಿ ಚಿರಂಜೀವಿ ಸರ್ಜಾ ಅಭಿನಯದ 'ಖಾಕಿ' ಸಿನಿಮಾ ಪ್ರಸಾರ ಕಾಣಲಿದೆ. ನವೀನ್ ರೆಡ್ಡಿ ನಿರ್ದೇಶನದ ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಜೊತೆ ತಾನ್ಯಾ ಹೋಪ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಕೇಬಲ್ ಆಪರೇಟರ್ ಆಗಿ ಕೆಲಸ ಮಾಡುವ ನಾಯಕ ತಾನು ವಾಸಿಸುವ ಪ್ರದೇಶದ ಜನರನ್ನು ಭೂಮಾಫಿಯಾ ಮತ್ತು ದುಷ್ಟ ಶಾಸಕನ ಕಿರುಕುಳದಿಂದ ಹೇಗೆ ರಕ್ಷಿಸುತ್ತಾನೆ ಎನ್ನುವುದು 'ಖಾಕಿ' ಚಿತ್ರದ ಕಥಾಹಂದರ.
ಇದರ ಜೊತೆಗೆ ಕೇವಲ ಖಾಕಿ ಧರಿಸಿದವರಷ್ಟೇ ಪೊಲೀಸರಲ್ಲ. ಬದಲಿಗೆ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರತಿಯೊಬ್ಬರೂ ಕೂಡಾ ಪೊಲೀಸ್ ಇದ್ದಂತೆ ಎಂಬ ಉತ್ತಮ ಸಂದೇಶವನ್ನು 'ಖಾಕಿ' ಸಿನಿಮಾ ಮೂಲಕ ಸಮಾಜಕ್ಕೆ ಸಾರಿದ್ದಾರೆ ನಿರ್ದೇಶಕ ನವೀನ್ ರೆಡ್ಡಿ.
ವಿಭಿನ್ನ ಕಥಾ ಹಂದರದ ಮೂಲಕ ವೀಕ್ಷಕರನ್ನು ಸೆಳೆದಿರುವ 'ಖಾಕಿ' ಸಿನಿಮಾದಲ್ಲಿ ಛಾಯಾ ಸಿಂಗ್ ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ದೇವ್ ಗಿಲ್, ಶಿವಮಣಿ, ಶಶಿ, ಸುಧಾ ಬೆಳವಾಡಿ, ನವ್ಯಾ ತಾರಾಗಣದಲ್ಲಿದ್ದಾರೆ. ಈ ಚಿತ್ರ ಇದೇ ವರ್ಷ ಜನವರಿಯಲ್ಲಿ ಬಿಡುಗಡೆಯಾಗಿತ್ತು.