ಸಂಗೀತ ನಿರ್ದೇಶಕ, ಕನ್ನಡ ರ್‍ಯಾಪರ್ ಚಂದನ್ ಶೆಟ್ಟಿ ತಿಳಿದೋ, ತಿಳಿಯದೇನೋ ಆಗ್ಗಾಗ್ಗೆ ವಿವಾದಕ್ಕೆ ಸಿಲುಕುತ್ತಾರೆ. ತಮ್ಮ ಹೊಸ ಆಲ್ಬಂಗೆ ಸಂಬಂಧಿಸಿದಂತೆ ಅವರು ಇದೀಗ ಮತ್ತೆ ಹೊಸ ವಿವಾದದಲ್ಲಿ ಸಿಲುಕಿದ್ದಾರೆ.
ಚಂದನ್ ಶೆಟ್ಟಿ ಕಂಪೋಸ್ ಮಾಡಿರುವ ಹೊಸ ರ್‍ಯಾಪ್ ಸಾಂಗ್ 'ಕೋಲುಮಂಡೆ' ಗಣೇಶ ಹಬ್ಬದಂದು ಬಿಡುಗಡೆಯಾಗಿತ್ತು. ಈ ಹಾಡಿಗೆ ಈಗ ವಿರೋಧ ವ್ಯಕ್ತವಾಗಿದೆ. ಚಂದನ್ ಶೆಟ್ಟಿ ಕೊಲುಮಂಡೆ ಹಾಡನ್ನು ಅಶ್ಲೀಲವಾಗಿ ಚಿತ್ರೀಕರಿಸುವ ಮೂಲಕ ಮೈಸೂರು, ಚಾಮರಾಜನಗರ ಭಾಗದ ಜನರ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ. ಚಂದನ್ ಶೆಟ್ಟಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲೈಮಹದೇಶ್ವರ ಸ್ವಾಮಿ ಇತಿಹಾಸ ಸಾರುವ ಹಾಡನ್ನು ಚಂದನ್ ಶೆಟ್ಟಿ ತಿರುಚಿ ಹಾಡಿದ್ದಾರೆ. ನಮ್ಮಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಮೈಸೂರು ಭಾಗದ ಜನತೆ ಆರೋಪ ಮಾಡಿದ್ದಾರೆ.
![Chandan shetty Kolumande song controversy](https://etvbharatimages.akamaized.net/etvbharat/prod-images/8548651_497_8548651_1598343018131.png)
ಶರಣೆ ಸಂಕಣ್ಣೆ ಅವರನ್ನುಅಶ್ಲೀಲವಾಗಿ ಪ್ರದರ್ಶಿಸುವ ಮೂಲಕ ಅವರಿಗೆ ಅವಮಾನ ಮಾಡಲಾಗಿದೆ ಹಳೆಯ ಸುಂದರ ಜಾನಪದ ಗೀತೆಯನ್ನು ಚಂದನ್ ತಮ್ಮ ಲಾಭಕ್ಕಾಗಿ ಬಳಸಿಕೊಂಡು ಹಾಳು ಮಾಡಿದ್ದಾರೆ. ಕೂಡಲೇ ಚಂದನ್ ಈ ಹಾಡನ್ನು ಯೂಟ್ಯೂಬ್ನಿಂದ ತೆಗೆಯಬೇಕು. ಇಲ್ಲವಾದರೆ ಅವರ ಮನೆ ಮುಂದೆ ಧರಣಿ ಮಾಡಬೇಕಾಗುತ್ತದೆ. ಜೊತೆಗೆ ಅವರ ಎಲ್ಲಾ ಕಾರ್ಯಕ್ರಮಗಳನ್ನು ಬಹಿಷ್ಕರಿಸಲಾಗುವುದು ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.
![Chandan shetty Kolumande song controversy](https://etvbharatimages.akamaized.net/etvbharat/prod-images/8548651_192_8548651_1598343106126.png)
ಇನ್ನು ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಚಂದನ್ ಶೆಟ್ಟಿ, ಚಾಮರಾಜನಗರ ಜನತೆಯ ಕ್ಷಮೆ ಕೇಳಿದ್ದಾರೆ. ಒಂದು ವೇಳೆ ಶರಣೆ ಶಂಕಮ್ಮ ಅವರಿಗೆ ಇದರಿಂದ ಅವಮಾನ ಆಗಿದ್ದರೆ ಅದು ನಮಗೆ ತಿಳಿಯದೆ ಆಗಿರುವ ತಪ್ಪು. ಯಾರಿಗೂ ಅವಮಾನ ಮಾಡುವ ಉದ್ದೇಶವಿಲ್ಲ ಎಂದು ಚಂದನ್ ಶೆಟ್ಟಿ ಕ್ಷಮೆ ಕೇಳಿದ್ದಾರೆ.