ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅವನು ಮತ್ತು ಶ್ರಾವಣಿ' ಧಾರಾವಾಹಿಯಲ್ಲಿ ನಾಯಕಿಯಾಗಿ ಮನ ಸೆಳೆದಿದ್ದ ಚೆಲುವೆ ಹೆಸರು ಚೈತ್ರಾ ರೆಡ್ಡಿ. ಸುಮಾರು 4 ವರ್ಷಗಳ ಹಿಂದೆ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಚೈತ್ರಾ ರೆಡ್ಡಿ ಇತರ ಎರಡು ಧಾರಾವಾಹಿಯಲ್ಲಿ ನಟಿಸಿದ್ದರೂ ಇಂದಿಗೂ ಶ್ರಾವಣಿಯಾಗಿ ಮನೆ ಮಾತಾಗಿದ್ದಾರೆ.
ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡಾ ಕಾಣಿಸಿಕೊಂಡಿರುವ ಚೆಂದುಳ್ಳಿ ಚೆಲುವೆ ಚೈತ್ರಾ, ಹೆಚ್ಚಾಗಿ ಗುರುತಿಸಿಕೊಂಡಿದ್ದು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ. ಸದ್ಯಕ್ಕೆ ಜೀ ತಮಿಳು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಯಾರಡಿ ನೀ ಮೋಹಿನಿ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಚೈತ್ರಾ ರೆಡ್ಡಿ ಕಿರುತೆರೆ ಮಾತ್ರವಲ್ಲ, ಬೆಳ್ಳಿತೆರೆಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ವಿನೋದ್ ಪ್ರಭಾಕರ್ ಅವರ 'ರಗಡ್' ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚುವ ಮೂಲಕ ಬೆಳ್ಳಿತೆರೆಯಲ್ಲೂ ತಮ್ಮ ನಟನಾ ಛಾಪನ್ನು ಪಸರಿಸಿದ್ದಾರೆ ಚೈತ್ರಾ. ನಟನಾ ಲೋಕದಲ್ಲಿ ಮಿಂಚುತ್ತಿರುವ ಚೈತ್ರಾರೆಡ್ಡಿ ಬಂದ ಅವಕಾಶಗಳನ್ನೆಲ್ಲಾ ಓಕೆ ಎನ್ನುವುದಿಲ್ಲ. ಬದಲಿಗೆ ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. 'ಬಂದ ಅವಕಾಶಗಳನ್ನೆಲ್ಲಾ ಒಪ್ಪಿಕೊಂಡಿದ್ದರೆ ನಾನಿಂದು ಹತ್ತಾರು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದೆ. ಆದರೆ ನಾನು ಹಾಗಲ್ಲ, ಪಾತ್ರಗಳ ಆಯ್ಕೆಯಲ್ಲಿ ಬಹಳ ಚ್ಯೂಸಿ' ಎಂದು ಹೇಳುವ ಮುದ್ದು ಸುಂದರಿ ಸದ್ಯ ತಮಿಳಿನಲ್ಲಿ ಹೆಚ್ಚು ಹೆಚ್ಚು ಅವಕಾಶಗಳನ್ನು ಪಡೆಯುತ್ತಿದ್ದಾರೆ.