ನವದೆಹಲಿ: ಕೊರೊನಾದಿಂದಾಗಿ ಸ್ಥಗಿತವಾಗಿದ್ದ ಸಿನಿಮಾ, ಧಾರಾವಾಹಿ ಚಿತ್ರೀಕರಣವನ್ನು ಪುನಾರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಕೋವಿಡ್-19 ಮಾರ್ಗಸೂಚಿ ಸೂತ್ರಗಳನ್ನು (ಎಸ್‌ಒಪಿ) ಅನುಸರಿಸಿ ಸಿನಿಮಾ ಹಾಗೂ ಟಿವಿ ಕಾರ್ಯಕ್ರಮಗಳ ಚಿತ್ರೀಕರಣ ಪ್ರಾರಂಭಿಸಬಹುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಆರೋಗ್ಯ ಮತ್ತು ಗೃಹ ಸಚಿವಾಲಯಗಳ ಜೊತೆ ಚರ್ಚಿಸಿ, ಅಭಿಪ್ರಾಯ ಸಂಗ್ರಹಿಸಿ ಮಾರ್ಗಸೂಚಿಗಳನ್ನು ಅಂತಿಮಗೊಳಿಸಲಾಗಿದೆ. ಕ್ಯಾಮರಾಗಳ ಮುಂದೆ ಇರುವವರು ಅಂದರೆ ತೆರೆ ಮೇಲೆ ಬರುವವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಮಾಸ್ಕ್ ಧರಿಸಬೇಕು. ಚಿತ್ರೀಕರಣದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಕೊರೊನಾದಿಂದಾಗಿ ಕಳೆದ ಐವರು ತಿಂಗಳಿನಿಂದ ಚಿತ್ರೀಕರಣ ಸ್ಥಗಿತವಾಗಿತ್ತು. ಇದೀಗ ಕೋವಿಡ್ ಮಾರ್ಗಸೂಚಿಗಳೊಂದಿಗೆ ಪುನಾರಂಭಿಸುವುದರಿಂದ ಉದ್ಯೋಗಗಳು ಕೂಡ ಸೃಷ್ಟಿಯಾಗುತ್ತವೆ ಎಂದು ಜಾವಡೇಕರ್ ಹೇಳಿದರು.