ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಆತ ಬಿಗ್ಬಾಸ್ ಸ್ಪರ್ಧಿಯಾಗಿ ಹೋದಾಗಲಂತೂ ಅನೇಕರು ಬೇಸರ ವ್ಯಕ್ತಪಡಿಸಿದ್ದರು. ಇದೀಗ ದೊಡ್ಮನೆ ಸಹಸ್ಪರ್ಧಿಗಳು ಪ್ರಶಾಂತ್ ಸಂಬರಗಿ ವಿರುದ್ಧ ಸಿಡಿದೆದ್ದಿದ್ದಾರೆ.
ಇದನ್ನೂ ಓದಿ: ಅಭಿಮಾನಿಗಳ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡು ಸಂಭ್ರಮಿಸಿದ ದುನಿಯಾ ವಿಜಯ್
ಮಹಿಳಾ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ನೀಡುವಂತೆ ಸ್ಪರ್ಧಿಗಳಿಗೆ ಟಾಸ್ಕ್ ನೀಡಲಾಯ್ತು. ಯಾವ ಕಾರ್ಯಕ್ರಮ ನೀಡಬೇಕು, ಯಾವ ಟಾಪಿಕ್ ಎಂಬ ಬಗ್ಗೆ ಮನೆಯ ಸದಸ್ಯರು ಚರ್ಚೆ ನಡೆಸಲು ಆರಂಭಿಸಿದರು. ಒಳ್ಳೆಯ ಹುಡುಗಿ, ಫ್ಲರ್ಟ್ ಮಾಡುವ ಹುಡುಗಿ ಇಬ್ಬರ ನಡುವಿನ ವ್ಯತ್ಯಾಸ ತೋರಿಸೋಣ ಎಂದು ಬ್ರೋ ಗೌಡ ಸೂಚಿಸಿದರು. ದಿವ್ಯ ಮಾತನಾಡಿ, ಬಾಲ್ಯದಿಂದ ಶಾಲೆ, ಕಾಲೇಜು, ಮದುವೆ ಆದ ನಂತರ, ಹೀಗೆ ವಿವಿಧ ಹಂತದಲ್ಲಿ ಮಹಿಳೆ ಮೇಲೆ ಹೇಗೆ ದೌರ್ಜನ್ಯ ನಡೆಯುತ್ತದೆ ಎಂಬುದರ ಬಗ್ಗೆ ನಾಟಕ ಮಾಡೋಣ ಎಂದರು. ಇದಕ್ಕೆ ಮಧ್ಯ ಪ್ರವೇಶಿಸಿದ ಸಂಬರಗಿ, "ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿಲ್ಲ. ನಿಮ್ಮ ಅಕ್ಕ ತಂಗಿಯರಿಗೂ ಹೀಗೆ ಮಾಡುತ್ತೀರಾ? ಇದೆಲ್ಲ ಹಳೆ ಕಾಲದ ಸಮಸ್ಯೆಗಳು ಪ್ರಪಂಚ ಈಗ ಬದಲಾಗಿದೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಭ್ರೂಣ ಹತ್ಯೆ ಎಂಬುದು ಈಗ ಇಲ್ಲ. ಅದಕ್ಕೆಲ್ಲಾ ಕಾನೂನು ಬಂದಿದೆ. ನಾವಿನ್ನೂ ಹಳೆಯ ಕಾಲದಲ್ಲೇ ಇದ್ದೀವಿ ಈಗ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇಲ್ಲ" ಎಂದರು. ಪ್ರಶಾಂತ್ ಮಾತಿಗೆ ಮನೆಯ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ನೀವು ಹೇಳುತ್ತಿರುವುದು ಸರಿಯಲ್ಲ ನಿಮ್ಮ ಮನೆಯಲ್ಲಿ ನಿಮ್ಮ ಹೆಂಡತಿಯನ್ನೇ ಒಮ್ಮೆ ಕೇಳಿ ನೋಡಿ, ಮಹಿಳೆ ಈಗಲೂ ಹೇಗೆ ತುಳಿತಕ್ಕೊಳಗಾಗಿದ್ದಾಳೆ ಎಂದು ಅವರೇ ಹೇಳುತ್ತಾರೆ ಎಂದು ದಿವ್ಯ ಹೇಳಿದರು. ರಾಜೇಶ್, ಮಂಜು, ರಘು ಗೌಡ, ಶುಭಾ ಪೂಂಜಾ, ದಿವ್ಯಾ ಸುರೇಶ್, ಅರವಿಂದ್ ಸೇರಿದಂತೆ ಹಲವರು ಪ್ರಶಾಂತ್ ಸಂಬರಗಿ ಮಾತಿಗೆ ವಿರೋಧ ವ್ಯಕ್ತಪಡಿಸಿದರು.