ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ 'ಸೀತಾ ವಲ್ಲಭ'ದಲ್ಲಿ ನಾಯಕ ಆರ್ಯನ ತಂಗಿ ಅದಿತಿ ಪಾತ್ರದಲ್ಲಿ ನಟಿಸುತ್ತಿರುವ ಕಾವ್ಯ ಎಸ್. ರಮೇಶ್ ಬಳ್ಳಾರಿಯ ಹರಪ್ಪನಹಳ್ಳಿಯವರು. ಚಿಕ್ಕಂದಿನಿಂದ ತಾವು ಕಂಡ ಕನಸನ್ನು ನನಸು ಮಾಡಿಕೊಂಡಿದ್ದಾರೆ ಈ ಹುಡುಗಿ.
ತಾನು ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳಬೇಕು ಎಂಬುದು ಕಾವ್ಯ ಆಸೆ. ಈ ಕಾರಣಕ್ಕೆ ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿದ್ದ ಎಲ್ಲಾ ಸ್ಪರ್ಧೆಗಳಲ್ಲೂ ಅವರು ತಪ್ಪದೆ ಭಾಗವಹಿಸುತ್ತಿದ್ದರಂತೆ. ಆರಂಭದಲ್ಲಿ ಕಾವ್ಯ ಅವರಿಗೆ ನಟನೆ ಬಗ್ಗೆ ಏನೂ ತಿಳಿದಿರಲಿಲ್ಲ. ಆದರೆ ಇಂದು ಆಕೆ ನಿಮ್ಮನ್ನು ಅದಿತಿ ಆಗಿ ಧಾರಾವಾಹಿಪ್ರಿಯರನ್ನು ರಂಜಿಸುತ್ತಿದ್ದಾರೆ ಎಂದರೆ ಅದಕ್ಕೆ ಆಕೆ ಪಟ್ಟ ಶ್ರಮವೇ ಕಾರಣ.
ಆಡಿಷನ್ನಲ್ಲಿ ಭಾಗವಹಿಸಿದ್ದ ಕಾವ್ಯ ಧಾರಾವಾಹಿಯಲ್ಲಿ ನಟಿಸಲು ಆಯ್ಕೆ ಆದರು. ನಟನೆ ತಿಳಿಯದಿದ್ದರೂ ಅಪ್ಪ ಅಮ್ಮನ ಪ್ರೋತ್ಸಾಹದಿಂದ ಧೈರ್ಯ ಮಾಡಿ ಮಾಂಗಲ್ಯಂ ತಂತು ನಾನೇನ ಧಾರಾವಾಹಿಯಲ್ಲಿ ನಟಿಸಲು ಮುಂದಾದರು. ಅಲ್ಲಿಂದ ಒಂದೊಂದಾಗಿ ನಟನೆಯ ರೀತಿ ರಿವಾಜುಗಳನ್ನು ಕಲಿತರು. ಈ ಧಾರಾವಾಹಿ ಮುಗಿಯುತ್ತಿದ್ದಂತೆ 'ಸೀತಾ ವಲ್ಲಭ' ಧಾರಾವಾಹಿಯಲ್ಲಿ ನಟಿಸಲು ಅವಕಾಶ ದೊರೆಯಿತು. ಈ ಮೂಲಕ ಸುಮಾರು 2 ವರ್ಷಗಳಿಂದ ಕಾವ್ಯ, ಸೀತಾ ವಲ್ಲಭ ಧಾರಾವಾಹಿಯ ಭಾಗವಾಗಿದ್ದಾರೆ.
'ಚೌಕಾಬಾರ' ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲೂ ಮಿಂಚಿರುವ ಕಾವ್ಯ, ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ. ಅವಕಾಶ ಸಿಕ್ಕರೆ ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲೂ ನಟಿಸಲು ನಾನು ರೆಡಿ ಎನ್ನುವ ಕಾವ್ಯಗೆ ಬಾಲಿವುಡ್ ನಟಿ ದಿವಂಗತ ಶ್ರೀದೇವಿ ರೋಲ್ ಮಾಡೆಲ್ ಅಂತೆ.