ಸದಾ ಅರಳು ಹುರಿದಂತೆ ಪಟಪಟನೆ ಮಾತನಾಡುವ ಮಂಗಳೂರು ಬೆಡಗಿ ಅನುಶ್ರೀ ನಿರೂಪಣೆಯಿಂದಲೇ ಫೇಮಸ್ಸು. ಈಗಾಗಲೇ ಹಲವು ಕಾರ್ಯಕ್ರಮಗಳನ್ನು ನಿರೂಪಿಸಿರುವ ಕರಾವಳಿ ಕುವರಿ ಇದೀಗ ಸುದ್ದಿಯಲ್ಲಿದ್ದಾರೆ. ಅದಕ್ಕೆ ಮುಖ್ಯ ಕಾರಣ ಮದುವೆ ವಿಷ್ಯ!
ಹೌದು, ಅನುಶ್ರೀ ಮದುವೆಯಾಗುತ್ತಿದ್ದಾರೆ ಎಂಬ ವದಂತಿ ಇದೀಗ ಕೇಳಿ ಬರುತ್ತಿದೆ. ಆದರೆ ಸ್ವತಃ ಅನುಶ್ರೀ ಇವರೇ ಈ ಮಾತನ್ನು ತಳ್ಳಿಹಾಕಿದ್ದಾರೆ. ಮಾತ್ರವಲ್ಲ, ಈ ವದಂತಿಗಳಿಂದ ಅವರಿಗೆ ತುಂಬಾ ಬೇಸರವೂ ಆಗಿದೆಯಂತೆ. ತಮ್ಮ ಮದುವೆಯ ಬಗ್ಗೆ ಹರಡಿರುವ ವದಂತಿಯ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅನುಶ್ರೀ ನನ್ನ ಮದುವೆಯ ಬಗ್ಗೆ ವದಂತಿ ಹರಡಿರುವುದು ಇದೇ ಮೊದಲಲ್ಲ ಎಂದಿದ್ದಾರೆ.
ಜನರು ನನಗೆ ಇದೇ ಮೊದಲ ಬಾರಿ ಮದುವೆ ಮಾಡುತ್ತಿರುವುದಲ್ಲ. ಈಗಾಗಲೇ ಹಲವು ಬಾರಿ ನನಗೆ ಮದುವೆ ಮಾಡಿಸಿದ್ದಾರೆ. ಮದುವೆ ಎನ್ನುವುದು ನನ್ನ ವೈಯಕ್ತಿಕ ವಿಚಾರ. ಮಾತ್ರವಲ್ಲ, ಮದುವೆಯು ನನ್ನ ಸ್ವಂತ ನಿರ್ಧಾರವೂ ಹೌದು. ಇನ್ನು ನನಗೆ ಮದುವೆ ನಿಶ್ಚಯವಾದರೆ ಖಂಡಿತಾ ನಿಮಗೆಲ್ಲರಿಗೂ ಹೇಳುತ್ತೇನೆ. ಅಲ್ಲಿಯವರೆಗೂ ದಯವಿಟ್ಟು ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಅನುಶ್ರೀ ಹೇಳಿದ್ದಾರೆ.
ಇದೀಗ ನನ್ನ ಗಮನ ಏನಿದ್ದರೂ ನನ್ನ ಕರಿಯರ್ ನತ್ತ. ಮದುವೆಯ ಬಗ್ಗೆ ನಾನು ಇನ್ನು ಏನೂ ಆಲೋಚಿಸಿಲ್ಲ ಎಂದು ಹೇಳಿರುವ ಅನುಶ್ರೀ, ಸದ್ಯ ನಿರೂಪಣೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರೊಂದಿಗೆ ಬೆಳ್ಳಿತೆರೆಯಲ್ಲೂ ನಟನೆಯ ಮೂಲಕ ಮನೆ ಮಾತಾಗಿರುವ ಅನುಶ್ರೀ ಬಿಗ್ ಬಾಸ್ ಸ್ಪರ್ಧಿಯಾಗಿಯೂ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡಿಕೊಂಡಿರುವ ಅನುಶ್ರೀ ಸಾಕಷ್ಟು ಕಲಾವಿದರುಗಳನ್ನು ಸಂದರ್ಶನ ಮಾಡಿದ್ದಾರೆ.