ಕನ್ನಡ ಕಿರುತೆರೆಯಲ್ಲಿ ಕೊರೊನಾ ಲಾಕ್ಡೌನ್ನಿಂದ ಈಗಾಗಲೇ ಸಾಕಷ್ಟು ಬದಲಾವಣೆಗಳಾಗಿವೆ. ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಸುಮಾರು 20ಕ್ಕೂ ಹೆಚ್ಚು ಧಾರಾವಾಹಿಗಳು ಶಾಶ್ವತವಾಗಿ ಪ್ರಸಾರ ನಿಲ್ಲಿಸಿದ್ದು ಆ ಜಾಗವನ್ನು ಡಬ್ಬಿಂಗ್ ಧಾರಾವಾಹಿಗಳು ಆಕ್ರಮಿಸಿವೆ.
ಅಲಾದ್ದಿನ್, ಗಣೇಶ, ರಾಧಾ ಕೃಷ್ಣ, ಮಹಾಭಾರತ, ಪರಮಾವತಾರಿ ಶ್ರೀಕೃಷ್ಣ, ದೇವಕಿ ನಂದನ ನಂತರ ಇದೀಗ ಮತ್ತೊಂದು ಪೌರಾಣಿಕ ಧಾರಾವಾಹಿ ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗಲಿದೆ. ಹಿಂದಿಯ ಲೈಫ್ ಓಕೆ ಚಾನೆಲ್ ನಲ್ಲಿ ಪ್ರಸಾರವಾಗಿದ್ದ ಪೌರಾಣಿಕ ಧಾರಾವಾಹಿ 'ದೇವೋಂಕ ದೇವ್ ಮಹಾದೇವ್' ಇದೀಗ ಕನ್ನಡ ಭಾಷೆಗೆ ಡಬ್ ಆಗಿ ಓಂ ನಮಃ ಶಿವಾಯ ಹೆಸರಿನಲ್ಲಿ ಪ್ರಸಾರ ಕಾಣಲಿದೆ.
ಪರಶಿವನ ಎಲ್ಲಾ ವಿಚಾರಗಳನ್ನು ಒಳಗೊಂಡಿರುವ 'ಒಂ ನಮಃ ಶಿವಾಯ' ಧಾರಾವಾಹಿ ಜುಲೈ 13 ರಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಆರಂಭವಾಗಲಿದೆ. 820 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿರುವ 'ದೇವೋಂಕ ದೇವ್ ಮಹಾದೇವ್' ಧಾರಾವಾಹಿಯ ಕನ್ನಡ ಅವತರಣಿಕೆಯನ್ನು ನೋಡಲು ಪೌರಾಣಿಕ ಧಾರಾವಾಹಿಪ್ರಿಯರು ಸಂತಸದಿಂದ ಕಾಯುತ್ತಿದ್ದಾರೆ. ಧಾರಾವಾಹಿಯಲ್ಲಿ ಮಹಾದೇವನಾಗಿ ಮೋಹಿತ್ ರೈನಾ ಬಣ್ಣ ಹಚ್ಚಿದ್ದಾರೆ. ಪಾರ್ವತಿಯಾಗಿ ಸೋನಾರಿಕಾ ಭಡೋರಿಯಾ ಅಭಿನಯಿಸಿದ್ದರೆ, ಸತಿ ಪಾತ್ರದಲ್ಲಿ ಕೆಜಿಎಫ್ ಖ್ಯಾತಿಯ ಮೌನಿ ರಾಯ್ ಕಾಣಿಸಿಕೊಳ್ಳಲಿದ್ದಾರೆ.