ಹೊಸತನದೊಂದಿಗೆ ಬರುತ್ತಿರುವ ಉದಯ ಟಿವಿಯಲ್ಲಿ ಹಿರಿಯರಿಗೆ ಮಾತ್ರವಲ್ಲ ಮಕ್ಕಳನ್ನು ರಂಜಿಸಲು ಕೂಡಾ ಹೊಸ ಕಾರ್ಯಕ್ರಮಗಳು ಸಿದ್ಧವಾಗಿವೆ. ಈ ಕಾರ್ಯಕ್ರಮಗಳಲ್ಲಿ 'ಅಲಾದ್ದಿನ್' ಹಾಗೂ 'ಗಣೇಶ' ಎರಡೂ ಕಾರ್ಯಕ್ರಮಗಳು ಪುಟಾಣಿಗಳನ್ನು ರಂಜಿಸಲು ಬರುತ್ತಿವೆ.
ಅದೊಂದು ಕಾಲ ಇತ್ತು, ಅರೆಬಿಯನ್ ನೈಟ್ಸ್ ಸರಣಿಗಳೆಂದರೆ ಎಲ್ಲರಿಗೂ ಅಚ್ಚು ಮೆಚ್ಚು, ಈ ಸರಣಿಗಳಲ್ಲಿ ಎಲ್ಲರ ಮನಸೂರೆಗೊಂಡಿದ್ದು 'ಅಲಾದ್ದಿನ್' ಕಥೆ. ಕಥೆ ಪುಸ್ತಕಗಳಿಂದ ಕಾರ್ಟೂನ್, ಕಾರ್ಟೂನ್ನಿಂದ ಸಿನಿಮಾಗಳು ತಯಾರಾಗುವುದನ್ನು ನಾವು ನೋಡಿದ್ದೇವೆ. ಅಲಾದ್ದಿನ್ ಕೂಡಾ ಕಥೆ ಪುಸ್ತಕಗಳಿಂದ ತಯಾರಾದ ಸರಣಿ. ಜಾಫರ್ನ ರಾಜತಂತ್ರಕ್ಕೆ ಪ್ರತಿಯಾಗಿ ಜೀನಿಯ ಮಾಯಾತಂತ್ರ, ಅಬೂವಿನ ತುಂಟಾಟದ ಜೊತೆಗೆ ಮಾಯಾಗಂಬಳಿಯ ಸಾಹಸ. ಜಾಸ್ಮಿನ್ಳ ನಿಷ್ಕಲ್ಮಶ ಪ್ರೀತಿ, ಇವೆಲ್ಲದರ ಜೊತೆ ತನ್ನ ಕೈಚಳಕದ ಮೂಲಕ ಪ್ರೇಕ್ಷಕರ ಮನಸ್ಸು ಕದಿಯಲು ಬರುತ್ತಿದ್ದಾರೆ ಅಲಾದ್ದಿನ್.
ಅದೇ ಅಲಾದ್ದಿನ್, ಅದ್ದೂರಿ ಸೆಟ್, ಗ್ರಾಫಿಕ್ಸ್, ಹಲವಾರು ಸಾಹಸ ದೃಶ್ಯಗಳನ್ನು ಒಳಗೊಂಡ ಧಾರಾವಾಹಿ ಉದಯ ವಾಹಿನಿಯಲ್ಲಿ ಜೂನ್ 8 ರಿಂದ ಸೋಮವಾರದಿಂದ ಶುಕ್ರವಾರದವರೆಗೂ ಸಂಜೆ 6ಕ್ಕೆ ಪ್ರಸಾರವಾಗಲಿದೆ.
ಇನ್ನು ಎಲ್ಲೆಡೆ ಮೊದಲು ಪೂಜಿಸುವುದು ವಿಘ್ನ ನಿವಾರಕ ಗಣೇಶನನ್ನು. ಪ್ರಥಮ ಪೂಜಿತ ಗಣೇಶ ಎಂದರೆ ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ಇಷ್ಟ. ಬಾಲ ಗಣೇಶನ ತುಂಟಾಟ ಮತ್ತು ಮಹಿಮೆಗಳು ಬೇಕಾದಷ್ಟಿದೆ. ಈ ಕಥೆಗಳನ್ನು ಕಾರ್ಟೂನ್ ಹಾಗೂ ಸಿನಿಮಾಗಳ ಮೂಲಕ ಈಗಾಗಲೇ ನೋಡಿದ್ದೇವೆ. ಆದರೆ ಕಿರುತೆರೆಯಲ್ಲಿ, ಅದರಲ್ಲೂ ಕನ್ನಡದಲ್ಲಿ ಗಣೇಶನ ಪ್ರತಿಯೊಂದು ವಿಚಾರವನ್ನು ಎಳೆಎಳೆಯಾಗಿ ತೋರಿಸಿರುವ ಧಾರಾವಾಹಿ ನಿಮ್ಮ ಮುಂದೆ ಬರುತ್ತಿದೆ.
ವಿಘ್ನ ವಿನಾಶಕನ ಅಪರೂಪದ ಕಥೆ ಹೊಂದಿರುವ 'ಗಣೇಶ' ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಈ ಎರಡೂ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ಪ್ರಸಾರ ಮಾಡಲಾಗುತ್ತಿದೆ. ಲಾಕ್ಡೌನ್ನಿಂದ ಮನೆಯಲ್ಲೇ ಇರುವ ಮಕ್ಕಳಿಗೆ ಈ ಪೌರಾಣಿಕ ಹಾಗೂ ಫ್ಯಾಂಟಸಿ ಧಾರಾವಾಹಿಗಳು ಮನರಂಜನೆ ನೀಡುವುದರಲ್ಲಿ ಅನುಮಾನವೇ ಇಲ್ಲ.