ಮುಂಬೈ : 'ಕಾಸ್ಟಿಂಗ್ ಕೌಚ್' ಚಿತ್ರರಂಗದಲ್ಲಿರುವ ಪುರಾತನ ಅಲಿಖಿತ ಸಂಪ್ರದಾಯ. ಬಣ್ಣ ಹಚ್ಚಲು ಚಿತ್ರರಂಗಕ್ಕೆ ಬರುವ ನಟ-ನಟಿಯರಿಗೆ ಬಟ್ಟೆ ಬಿಚ್ಚುವಂತೆ ಪೀಡಿಸುವ ಕೀಚಕರು ಸಿನಿಮಾ ಇಂಡಸ್ಟ್ರಿಯಲ್ಲಿರುವ ವಿಚಾರ ಸಿಕ್ರೇಟ್ ಆಗಿ ಉಳಿದಿಲ್ಲ.
ಕಳೆದ ವರ್ಷ ಹಾಲಿವುಡ್ನಲ್ಲಿ ಉದಯವಾದ 'ಮೀಟೂ' ಅಭಿಯಾನ, ಬೆಳ್ಳಿ ಪರದೆ ಹಿಂದಿರುವ ಕತ್ತಲ ಕೋಣೆ ಬಗ್ಗೆ ಇಡೀ ವಿಶ್ವಕ್ಕೆ ಸಾರಿತು. ಅದು ಭಾರತೀಯ ಚಿತ್ರರಂಗಕ್ಕೆ ಕಾಲಿಟ್ಟಮೇಲಂತೂ ಸಂಚಲನ ಮೂಡಿತು. ಸಾಕಷ್ಟು ನಟಿಯರು ತಾವು ಎದುರಿಸಿದ ಕರಾಳತೆಯನ್ನ ಎಲ್ಲರೆದುರೂ ಹೇಳಿಕೊಂಡಿದ್ದರು. ಕಾಳ್ಗಿಚ್ಚಿನಂತೆ ವೇಗ ಪಡೆದುಕೊಂಡ ಈ ಅಭಿಯಾನ, ದೊಡ್ಡ ದೊಡ್ಡ ನಟರ ಬುಡಕ್ಕೆ ಬೆಂಕಿ ಇಟ್ಟಿತು.
ಈಗ ಮರಾಠಿ ನಟಿ ಶೃತಿ ಮರಾಠೆ ಕಾಮುಕ ನಿರ್ಮಾಪಕನ ಬಣ್ಣ ಬಯಲು ಮಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹಾಸಿಗೆಗೆ ಕರೆದ ನಿರ್ಮಾಪಕನ ಬೆವರಿಳಿಸಿರುವ ಕಥೆ ಹೇಳಿಕೊಂಡಿದ್ದಾರೆ. ಅದು ದೊಡ್ಡ ಪ್ರಾಜೆಕ್ಟ್. ಆ ಚಿತ್ರದ ನಿರ್ಮಾಪಕ ನನ್ನ ಬಳಿ ಬಂದು ನೇರವಾಗಿಯೇ ಒಂದು ರಾತ್ರಿ ನಿನ್ನ ಜತೆ ಇರಬೇಕು ಎಂದು ಆಫರ್ ಮಾಡಿದ. ಇದಕ್ಕೆ ಖಡಕ್ ಉತ್ತರ ಕೊಟ್ಟ ನಾನು, 'ಓಕೆ; ನನ್ನನ್ನು ನಟಿ ಮಾಡಲು ನನ್ನ ಜತೆ ಮಲಗಲು ಬಯಸುತ್ತಿದ್ದೀಯಾ. ಇದರಂತೆ ನಾಯಕನ ಜತೆಯೂ ಮಲಗುತ್ತಿಯಾ?' ಎಂದು ಪ್ರಶ್ನಿಸಿದೆ'. ನನ್ನ ಈ ಮೊಣಚು ಮಾತಿನಿಂದ ಆತ ವಿಚಲಿತಗೊಂಡಿದ್ದ' ಎಂದಿದ್ದಾರೆ ಶೃತಿ.
ಈ ಘಟನೆಯನ್ನು ಇಷ್ಟಕ್ಕೆ ಕೈ ಬಿಡದ ಶೃತಿ, ಎಲ್ಲರೆದರೂ ನಿರ್ಮಾಪಕನ ಕೊಳಕು ಬುದ್ಧಿ ಬಿಚ್ಚಿಟ್ಟರಂತೆ. ಬಳಿಕ ಆತನನ್ನು ಆ ಪ್ರಾಜೆಕ್ಟ್ನಿಂದ ಕೈ ಬಿಡಲಾಯಿತಂತೆ. ಇಷ್ಟೆಲ್ಲ ಹೇಳಿರುವ ಶೃತಿ, ತಮ್ಮನ್ನು ಮಂಚಕ್ಕೆ ಕರೆದ ಭೂಪನ ಹೆಸರು ಮಾತ್ರ ಬಹಿರಂಗ ಪಡಿಸಿಲ್ಲ.