ಕೊರೊನಾ ಕೆಟ್ಟ ದಿನಗಳ ವೇದನೆ ವಿವರಿಸಿದ ನಟಿ ಶಾಲಿನಿ - ಶಾಲಿನಿ ಸತ್ಯನಾರಾಯಣ
ನಮಗೆ ಕೋವಿಡ್-19 ಪಾಸಿಟಿವ್ ಕಂಡು ಬಂದಿದ್ದು, ಯಾವ ಆರೋಗ್ಯ ಸಮಸ್ಯೆಯೂ ನಮ್ಮನ್ನು ಕಾಡುತ್ತಿಲ್ಲ. ನಾವು ಹುಷಾರಾಗಿದ್ದೇವೆ ಎಂದು ಹಲವು ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಕ್ತಾರೆ. ಆದರೆ ಅದು ಹೇಗೆ ಸಾಧ್ಯ? ಕೊರೊನಾ ಬಂದ್ಮೇಲೆ ಚೆನ್ನಾಗಿದ್ದೇನೆ ಅಂತ ಹೇಳೋಕೆ ಸಾಧ್ಯವೇ ಇಲ್ಲ. ಅದಕ್ಕೆ ನಾನೇ ಸಾಕ್ಷಿ. ಸೆಲೆಬ್ರಿಟಿಗಳಾಗಿ ನಮಗೆ ಸಾಮಾಜಿಕ ಜವಾಬ್ದಾರಿ ಇದೆ. ಹೀಗಾಗಿ ಜನರಿಗೆ ರಿಯಾಲಿಟಿಯನ್ನೇ ತಿಳಿಸಬೇಕು ಎನ್ನುತ್ತಾರೆ ನಟಿ ಹಾಗು ನಿರೂಪಕಿ ಶಾಲಿನಿ.

"ನಾನು ನೋವಿನಿಂದ ಗಂಟೆಗೊಮ್ಮೆ ಅಳುತ್ತಿದ್ದೆ. ಹಲ್ಲುಜ್ಜುವುದಕ್ಕೂ ಆಗದಂತಹ ದಿನಗಳಿದ್ದವು. ಕೆಲವು ಬಾರಿ ಹತಾಶಳಾಗಿರುತ್ತಿದ್ದೆ. ಯಾಕೆಂದರೆ, ಈ ಖಾಯಿಲೆ ನಿಮ್ಮ ವ್ಯವಸ್ಥೆಯನ್ನು ಕಂಗೆಡಿಸುವುದಲ್ಲದೇ ನಿಮ್ಮ ಮನಸ್ಸನ್ನೂ ಹಾಳು ಮಾಡುತ್ತದೆ" ಎಂದು ನಿರೂಪಕಿ ಶಾಲಿನಿ ಕೋವಿಡ್ ಕಾಯಿಲೆಯ ಅನುಭವ ವಿವರಿಸುತ್ತಾರೆ.

"ನಾನು ಭ್ರಮೆಯಲ್ಲಿದ್ದೆ ಹಾಗೂ ವಾಸ್ತವವನ್ನೇ ಮರೆತಿದ್ದೆ. ಕೆಲವು ರಾತ್ರಿ 103 ಡಿಗ್ರಿ ಸೆಲ್ಸಿಯಸ್ ಜ್ವರ ಇತ್ತು. ನಾನು 8ನೇ ತರಗತಿಯಲ್ಲಿದ್ದಾಗ ಒಂದೂವರೆ ತಿಂಗಳು ಆಸ್ಪತ್ರೆಯಲ್ಲಿದ್ದೆ. ಆಗ ಜೀವನ್ಮರಣದ ಸ್ಥಿತಿಯಲ್ಲಿದ್ದೆ. ನೀರು ನುಂಗಲೂ ಕಷ್ಟಪಡುತ್ತಿದ್ದೆ. ನೀರು ಗಂಟಲಿನಲ್ಲಿ ಇಳಿಯುವಾಗ ಕಸದಂತೆ ಭಾಸವಾಗುತ್ತಿತ್ತು."
"ನನಗೆ ವೈರಸ್ ಹೇಗೆ ತಗುಲಿತು ತಿಳಿಯದು. ಆರಂಭದಲ್ಲಿ ತೀವ್ರವಾದ ಸುಸ್ತು ಕಾಣಿಸಿಕೊಂಡಿತು. ಇದು 12 ಗಂಟೆಯ ಸತತ ಶೂಟಿಂಗ್ನಿಂದ ಆಗಿರಬಹುದು ಎಂದು ಮೊದಲು ಭಾವಿಸಿದ್ದೆ. ಹೀಗೆ ಸಾಮಾನ್ಯವಾಗಿ ಆಗುತ್ತದೆ. ಕ್ರಮೇಣ ಗಂಟಲು, ಮೂಗು, ಕಿವಿಯಲ್ಲಿ ನೋವು ಕಾಣಿಸಿಕೊಂಡಿತು. ವೈದ್ಯರ ಬಳಿ ಹೋದಾಗ ಕೋವಿಡ್ ಪಾಸಿಟಿವ್ ಎಂದು ತಿಳಿಯಿತು. ಮನೆಯಲ್ಲಿ ಐಸೋಲೇಷನ್ ಆದೆ. ಗಂಡ ಹಾಗೂ ಮಗಳನ್ನು ಪರೀಕ್ಷೆಗೆ ಕಳುಹಿಸಿದೆ. ಇಬ್ಬರಿಗೂ ನೆಗೆಟಿವ್ ಬಂತು. ಮಗಳನ್ನು ಅತ್ತೆ ಮನೆಗೆ ಕಳುಹಿಸಿದೆ. ಈಗ ಗಂಡನಿಗೂ ಪಾಸಿಟಿವ್ ಬಂದಿದೆ. ನಾವಿಬ್ಬರೂ ಮನೆಯಲ್ಲಿ ಬೇರೆ ಬೇರೆ ಕೋಣೆಯಲ್ಲಿದ್ದೇವೆ."
"ಈಗ ನಿಧಾನವಾಗಿ ಹುಷಾರಾಗುತ್ತಿದ್ದೇನೆ. ಆದರೆ ಶ್ವಾಸಕೋಶ ಸೋಂಕಿನಿಂದ ಉಸಿರಾಟಕ್ಕೆ ತುಂಬಾ ಸಮಸ್ಯೆಯಾಗುತ್ತಿದೆ. ಕೋವಿಡ್ ನನಗೆ ಉಸಿರಾಟದ ಮಹತ್ವ ತಿಳಿಸಿಕೊಟ್ಟಿದೆ. ವೈದ್ಯರು ಉಸಿರಾಟದ ವ್ಯಾಯಾಮ ಮಾಡುವಂತೆ ಸೂಚಿಸಿದ್ದಾರೆ. ಈಗ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ರೂಮ್‌ನಿಂದ ಹೊರಗೆ ಬಂದಿದ್ದೇನೆ. ಒಂದೇ ಮನೆಯಲ್ಲಿದ್ದರೂ, ನಾನು ಹಾಗೂ ನನ್ನ ಪತಿ ಫೋನ್‌ನಲ್ಲಿ ಮಾತನಾಡುತ್ತೇವೆ. ಆದಷ್ಟು ಬೇಗ ಹುಷಾರಾಗುತ್ತೇನೆ."
"ನಮಗೆ ಕೋವಿಡ್-19 ಪಾಸಿಟಿವ್ ಕಂಡು ಬಂದಿದೆ. ನಮಗೆ ಯಾವ ಸಮಸ್ಯೆಯೂ ಕಾಡುತ್ತಿಲ್ಲ. ನಾವು ಹುಷಾರಾಗಿದ್ದೇವೆ ಎಂದು ಹಲವು ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಕ್ತಾರೆ. ಆದರೆ ಅದು ಹೇಗೆ ಸಾಧ್ಯ? ಕೊರೊನಾ ಬಂದ್ಮೇಲೆ ಚೆನ್ನಾಗಿದ್ದೇನೆ ಅಂತ ಹೇಳೋಕೆ ಸಾಧ್ಯವೇ ಇಲ್ಲ. ಅದಕ್ಕೆ ನಾನೇ ಸಾಕ್ಷಿ. ಸೆಲೆಬ್ರಿಟಿಗಳಾಗಿ ನಮಗೆ ಸಾಮಾಜಿಕ ಜವಾಬ್ದಾರಿ ಇದೆ. ಹೀಗಾಗಿ ಜನರಿಗೆ ರಿಯಾಲಿಟಿಯನ್ನೇ ತಿಳಿಸಬೇಕು" ಎನ್ನುತ್ತಾರೆ ಶಾಲಿನಿ.