ಕೆಲವೊಂದು ಬಾರಿ ಸೋಷಿಯಲ್ ಮೀಡಿಯಾಗಳು ಕೆಲವೊಂದು ಅದ್ವಾನಗಳಿಗೆ ಕಾರಣವಾಗುತ್ತವೆ. ಯಾರನ್ನೋ ಟೀಕಿಸಲು ಹೋಗಿ ಮತ್ತ್ಯಾರದೋ ಮೇಲೆ ದಾಳಿ ಮಾಡುವ ವಿಚಿತ್ರ ಪ್ರಸಂಗಗಳು ನಡೆದು ಬಿಡುತ್ತವೆ. ಇದೀಗ ಮಲೆಯಾಳಿ ಚೆಲುವೆ ಅನುಪಮಾ ಪರಮೇಶ್ವರನ್ ಇಂತಹ ಘಳಿಗೆ ಎದುರಿಸಿದ್ದಾರೆ.
ಹೌದು, ಪ್ರೇಮಂ ಬ್ಯೂಟಿ ಅನುಪಮಾ ಮಾಡದ ತಪ್ಪಿಗೆ ಬೆಲೆ ತೆರಬೇಕಾಗಿದೆ. ಇವರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಬೈಗುಳಗಳ ಕಾಮೆಂಟ್ಗಳ ಸುರಿಮಳೆಯಾಗುತ್ತಿದೆ. ಯಾರೋ ಮಾಡಿದ ತಪ್ಪಿಗೆ ನಟಸಾರ್ವಭೌಮನ ಚೆಲುವೆ ಶಿಕ್ಷೆ ಅನುಭವಿಸುವಂತಾಗಿದೆ.
ಅಷ್ಟಕ್ಕೂ ಆಗಿದ್ದೇನು ?
ದೇಶದಲ್ಲಿ ಲೋಕಸಭೆಯ ಚುನಾವಣೆಯ ಕಾವು ಜೋರಾಗಿದೆ. ಇತ್ತ ದೇವರನಾಡು ಕೇರಳದಲ್ಲಿಯೂ ಈ ಬಾರಿ ಚುನಾವಣೆಯ ರಣಕಣ ರಂಗೇರಿದೆ. ಪಕ್ಷದ ಅಭ್ಯರ್ಥಿಗಳು ಮತಬೇಟೆ ಕಾರ್ಯ ಚುರುಕುಗೊಳಿಸಿದ್ದಾರೆ. ಇಲ್ಲಿಯ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಶಬರಿ ಮಲೆ ಅಯ್ಯಪ್ಪನ ಹೆಸರು ಹೇಳಿ ಮತ ಕೇಳುವ ಮೂಲಕ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆ ತ್ರಿಶ್ಯೂರ್ ಜಿಲ್ಲಾಧಿಕಾರಿ ಟಿ.ವಿ ಅನುಪಮಾ, ಸುರೇಶ್ಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಇದು ಈತನ ಬೆಂಬಲಿಗರನ್ನು ಕೆರಳಿಸಿದೆ.
ಜಿಲ್ಲಾಧಿಕಾರಿಯ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ದಾಳಿ ನಡೆಸಿರುವ ಸುರೇಶ್ ಬೆಂಬಲಿಗರು, ತಪ್ಪಾಗಿ ನಟಿ ಅನುಪಮಾ ಫೇಸ್ಬುಕ್ ಪೇಜ್ನಲ್ಲಿ ದಾಳಿ ಮಾಡಿದ್ದಾರೆ. ಜಿಲ್ಲಾಧಿಕಾರಿಗೂ ನಟಿಗೂ ವ್ಯತ್ಯಾಸ ಕಂಡುಕೊಳ್ಳದ ನೆಟ್ಟಿಜನ್ಗಳು, ಅನುಪಮಾ ಅವರ ಹೊಸ ಚಿತ್ರ 'ರಾಕ್ಷಸಡು' ಪೋಸ್ಟರ್ ಕೆಳಗೆ ಟೀಕೆಗಳ ಸುರಿಮಳೆಗೈದಿದ್ದಾರೆ.