ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ 'ಮೃದುಲಾ' ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಅಮೃತಾ ರಾಮಮೂರ್ತಿ ತಾಯಿಯಾಗುತ್ತಿದ್ದಾರೆ. ಈ ವಿಷಯವನ್ನು ಸ್ವತಃ ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಸದ್ಯ ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಅಮೃತಾ, ಪತಿಯ ಜೊತೆಗಿನ ಫೋಟೋವನ್ನು ಶೇರ್ ಮಾಡಿಕೊಂಡು 'ನಾವೀಗ ಮೂರು ಜನ' ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ಅಮೃತಾ, ರಘು ಅವರನ್ನು 2019 ರಲ್ಲಿ ವಿವಾಹವಾದರು.
ಈ ದಂಪತಿ ಈ ಹಿಂದೆ 'ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ' ಧಾರಾವಾಹಿಯಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಅಲ್ಲಿಂದ, ಇವರಿಬ್ಬರ ನಡುವೆ ಸ್ನೇಹ ಬೆಳೆಯಿತು. ಗಾಢ ಸ್ನೇಹ ಪ್ರೀತಿಯಾಗಿ ಪರಿವರ್ತನೆಯಾಯಿತು.
ಪ್ರಸ್ತುತ ರಘು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅಮೃತಾ ‘ಕಸ್ತೂರಿ ನಿವಾಸ’ ಧಾರಾವಾಹಿಯಿಂದ ಹೊರ ಬಂದಿದ್ದು ದೊಡ್ಡ ಸುದ್ದಿಯಾಗಿತ್ತು. ಅಮೃತಾ ‘ಕಸ್ತೂರಿ ನಿವಾಸ’ 'ಮೃದುಲಾ' ಪಾತ್ರಕ್ಕಾಗಿ ಅಪಾರ ಅಭಿಮಾನಿಗಳನ್ನೂ ಗಳಿಸಿದ್ದರು.
ಅಮೃತ ಕನ್ನಡ ಪ್ರೇಕ್ಷಕರಿಗೆ ಹೊಸ ಮುಖವಲ್ಲ. ಅವರು ತಮ್ಮ ವೃತ್ತಿಜೀವನವನ್ನು 'ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ' ಎಂಬ ಜನಪ್ರಿಯ ಧಾರಾವಾಹಿಯ ಮೂಲಕ ಪ್ರಾರಂಭಿಸಿದರು.
ನಂತರ ಕುಲವಧು ಧಾರಾವಾಹಿಯಲ್ಲಿ 'ವಚನಾ' ಎಂಬ ಪಾತ್ರದ ಮೂಲಕ ಮನೆಮಾತಾದರು. ಅವರ 'ವಚನಾ' ಪಾತ್ರ ಕೂಡ ವೀಕ್ಷಕರಿಂದ ಭಾರೀ ಮೆಚ್ಚುಗೆ ಪಡೆಯಿತು.