ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮತ್ತೆ ವಸಂತ ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದ ವಿವೇಕ್ ಸಿಂಹ ಧಾರಾವಾಹಿಯಿಂದ ಹೊರಬಂದಿರುವುದು ತಿಳಿದೇ ಇದೆ. ವಿವೇಕ್ ಸಿಂಹ ಇದ್ದಕ್ಕಿದ್ದಂತೆ ಧಾರಾವಾಹಿಯಿಂದ ಹೊರಬಂದಿರುವುದು ಕಿರುತೆರೆ ಪ್ರೇಕ್ಷಕರಿಗೆ ಬೇಸರ ತಂದಿದೆ.
ಆದರೆ ಇದೀಗ ವಿವೇಕ್ ಸಿಂಹ ತಾವು ಧಾರಾವಾಹಿಯಿಂದ ಯಾಕೆ ಹೊರಬಂದೆ ಎಂದು ತಿಳಿಸಿದ್ದಾರೆ. ಮತ್ತೆ ವಸಂತ ಧಾರಾವಾಹಿಯಲ್ಲಿ ನಾನು ವಸಂತ ಪಾತ್ರ ಮಾಡುತ್ತಿದ್ದೆ. ನಾನು ಧಾರಾವಾಹಿ ಬಿಡುತ್ತಿರುವುದಕ್ಕೆ ವೈಯಕ್ತಿಕ ಕಾರಣವಿದೆ. ಪ್ರೀಮಿಯರ್ ಪದ್ಮಿನಿಯ ನಂತರ ಇದೀಗ ನಾನು ಮಗದೊಂದು ಸಿನಿಮಾದಲ್ಲಿ ನಟಿಸಲಿದ್ದೇನೆ. ಅದೇ ಕಾರಣದಿಂದ ನಾನು ಧಾರಾವಾಹಿಯಿಂದ ಹೊರಬಂದೆ ಎಂದು ಹೇಳಿದ್ದಾರೆ.
ಸುಮಾರು ವರ್ಷಗಳಿಂದ ನಾನು ಕಿರುತೆರೆಯಲ್ಲಿ ಅಭಿನಯಿಸುತ್ತಿದ್ದೇನೆ. ಉತ್ತಮ ಗುಣಮಟ್ಟ ಇರುವ ಸಿನಿಮಾಗಳಲ್ಲಿ ಬಣ್ಣ ಹಚ್ಚಬೇಕು ಎಂಬುದು ನನ್ನ ಬಹುದಿನದ ಕನಸು. ಇದೀಗ ಮತ್ತೊಂದು ಹೊಸ ಸಿನಿಮಾದಲ್ಲಿ ನಟಿಸುವ ಮೂಲಕ ಮತ್ತೆ ಬೆಳ್ಳಿತೆರೆಯಲ್ಲಿ ಬರಲಿದ್ದೇನೆ ಎನ್ನುತ್ತಾರೆ ವಿವೇಕ್ ಸಿಂಹ.
ವಿವೇಕ್ ಸೌಭಾಗ್ಯವತಿ, ಜನುಮದ ಜೋಡಿ, ಮಹಾದೇವಿ ಜೊತೆಗೆ ಮತ್ತೆ ವಸಂತ ಧಾರಾವಾಹಿಯಲ್ಲಿ ನಟಿಸುತ್ತಿದ್ದ ವಿವೇಕ್ ಸಿಂಹ ಇದೀಗ ಹಿರಿತೆರೆಯತ್ತ ಮುಖ ಮಾಡಿದ್ದಾರೆ.
ಮತ್ತೆ ವಸಂತ ಧಾರಾವಾಹಿಯ ನಿರ್ದೇಶಕರು, ಸಹ ನಿರ್ದೇಶಕರು, ಸಹ ಕಲಾವಿದರುಗಳನ್ನು ತುಂಬಾನೇ ಮಿಸ್ ಮಾಡುತ್ತಿದ್ದೇನೆ ಎಂದು ಹೇಳುವ ವಿವೇಕ್ ಸಿಂಹ ಇದು ಮಗದೊಂದು ಸುಂದರ ಜರ್ನಿಯಾಗಿತ್ತು ಎಂದು ಹೇಳಲು ಮರೆಯುವುದಿಲ್ಲ.