ಬೆಂಗಳೂರಿನ ಸಿಐಡಿಯ ಸೈಬರ್ ಕ್ರೈಂ ವಿಭಾಗ ಇತ್ತೀಚೆಗೆ ವಿಡಿಯೋವೊಂದು ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ನಟ ಕಿರಣ್ ರಾಜ್ “ಆಕ್ಸಿಜನ್ ದೊರೆಯಲಿದೆ” ಎಂಬ ಜಾಹೀರಾತು ನೋಡಿ ಮೋಸ ಹೋಗಬೇಡಿ ಎಂದು ಜನರಿಗೆ ಮನವಿ ಮಾಡಿದ್ದಾರೆ.
ವಾಟ್ಸ್ಆ್ಯಪ್, ಫೇಸ್ಬುಕ್ನಲ್ಲಿ ಆಕ್ಸಿಜನ್ ದೊರೆಯಲಿದೆ ಎಂಬ ಜಾಹೀರಾತನ್ನು ನೋಡಿ ಕಣ್ಮುಚ್ಚಿ ನಂಬಬೇಡಿ. ಯಾಕಂದ್ರೆ ಆಕ್ಸಿಜನ್ ಸಪ್ಲೈ ಮಾಡ್ತೀವಿ ಅಂತ ಅಡ್ವಾನ್ಸ್ ತೆಗೆದುಕೊಳ್ಳುತ್ತಾರೆ. ಇದರಿಂದ ನೀವು ಮೋಸ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಅಡ್ವಾನ್ಸ್ ಕೊಡೋ ಮುಂಚೆ ಅವರ ಬಗ್ಗೆ ವಿವರವಾದ ಮಾಹಿತಿ ಪಡೆದು, ಸರಿಯಾಗಿ ವಿಚಾರಿಸಿ ಆಮೇಲೆ ಮುಂದುವರೆಯಿರಿ ಎಂದು ಕಿರಣ್ ಮನವಿ ಮಾಡಿದ್ದಾರೆ.
ಈ ಸಂಕಷ್ಟ ಕಾಲದಲ್ಲಿ ಕೇವಲ ಕೊರೊನಾದಿಂದ ಮಾತ್ರವಲ್ಲ, ಸೈಬರ್ ಫ್ರಾಡ್ನಿಂದ ಹುಷಾರಾಗಿರಿ ಎಂದು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಕಿರಣ್ ರಾಜ್ ರಾಜ್ಯದಲ್ಲಿ ಲಾಕ್ಡೌನ್ ಆದ ನಂತರ ತಮ್ಮ ಫೌಂಡೇಶನ್ ವತಿಯಿಂದ ಕೊರೊನಾ ಸೋಂಕಿತರಿಗೆ, ನಿರ್ಗತಿಕರಿಗೆ, ಕಾರ್ಮಿಕರಿಗೆ ಆಹಾರ ಸೇರಿದಂತೆ ಮತ್ತಿತರ ವ್ಯವಸ್ಥೆಗಳನ್ನು ಮಾಡುತ್ತಾ ಬಂದಿದ್ದಾರೆ. ಜನರು ಸಹ ಇವರ ಕೆಲಸಗಳನ್ನು ನೋಡಿ ಶ್ಲಾಘಿಸುತ್ತಿದ್ದಾರೆ.
ಕನ್ನಡತಿ ಧಾರಾವಾಹಿ ಚಿತ್ರೀಕರಣ ಸದ್ಯ ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿರುವುದರಿಂದ ಕಿರಣ್ ರಾಜ್ ಈಗ ಹೈದರಾಬಾದ್ನಲ್ಲಿದ್ದುಕೊಂಡೇ ತಮ್ಮ ಫೌಂಡೇಶನ್ನ ಕೆಲಸ ಕಾರ್ಯಗಳನ್ನು ಮುಂದುವರೆಸುತ್ತಿದ್ದಾರೆ.